Rescue of two youths who were drowning in the old age pit

ಕೊಪ್ಪಳ : ತಾಲೂಕಿನ ಹಳೆಗೊಂಡಬಾಳ ಗ್ರಾಮದ ಬಳಿ ಇರುವ ಹಿರೇಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರನ್ನು ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯವರು ಶನಿವಾರ ರಕ್ಷಿಸಿದ್ದಾರೆ.
ಹಳೆಗೊಂಡಬಾಳ ಗ್ರಾಮದ ಇರ್ಷಾದ್ ತಂದೆ ಹುಸೇನ್ ಪೀರ್ ಮತ್ತು ಶ್ರೀಕಾಂತ ಪಟ್ಟದಕ್ಕಲ್ಲು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ದಾರಾಕಾರವಾಗಿ ಸುರಿದ ಮಳೆಗೆ ಹಿರೇಹಳ್ಳ ಜಲಾಶಯ ತುಂಬಿದ ಪರಿಣಾಮ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಹರಿಯ ಬಿಡಲಾಗಿತ್ತು. ಈ ವೇಳೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಇರ್ಷಾದ್ ಮತ್ತು ಶ್ರೀಕಾಂತ ಎಂಬ ಯುವಕರು ರಕ್ಷಣೆಗೆ ಕಿರುಚಾಡಿದ್ದಾರೆ, ಅಚಾನಕ್ಕಾಗಿ ಅಲ್ಲಿಗೆ ಬಂದ ಗ್ರಾಮದ ಯುವಕರಾದ ಅಬ್ಬಣ ಹಾಗೂ ಕೃಷ್ಣ ಇವರ ಕಿರುಚಾಟ ಕೇಳಿ ಕೂಡಲೇ 112 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆ ಪಿ.ಎಸ್.ಐ ಅಶೋಕ್ ಬೇವುರ್ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯಪ್ರವೃತ್ತರಾಗಿ ಯುವಕರನ್ನು ಹಗ್ಗದ ಸಹಾಯದಿಂದ ಹರಸಾಹಸ ಪಟ್ಟು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಜೀವ ರಕ್ಷಿಸಿದ ಕಾರ್ಯಕ್ಕೆ ಎಲ್ಲಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ರಕ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೈಬು ಮಕಾoದರ್, ಶ್ರೀಕಾಂತ್, ಉಮೇಶ್ ನಾಯ್ಕ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.