Good response to Raichur bandh call by Union of Madiga communities on Wednesday
ರಾಯಚೂರು: ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮಾದಿಗ ಸಮುದಾಯಗಳ ಒಕ್ಕೂಟದಿಂದ ಬುಧವಾರ ರಾಯಚೂರು ಬಂದ್‌ಗೆ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಲಿತ ಪರ ಸಂಘಟನೆಗಳು ರಾಯಚೂರು ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಜಿಲ್ಲೆಯ ಮಾನ್ವಿ, ದೇವದುರ್ಗ, ಸಿಂಧನೂರು, ಲಿಂಗಸಗೂರು, ಸಿರವಾರ ಎಲ್ಲಾ ತಾಲ್ಲೂಕು ಸೇರಿದಂತೆ ರಾಯಚೂರಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಅಂಬಣ್ಣ ಆರೋಲಿಕರ್ ಮಾತನಾಡಿ, ‘ಸುಪ್ರೀಂ ಕೋರ್ಟ್ ಒಳಮೀಸಲಾತಿ ಕುರಿತು ತೀರ್ಪು ನೀಡಿದೆ. ಆಯಾ ರಾಜ್ಯಗಳಿಗೆ ಜನಸಂಖ್ಯೆ ಅನುಗುಣವಾಗಿ ಜಾರಿಗೆ ಸೂಚಿಸಿದೆ, ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2 ತಿಂಗಳು ಕಳೆದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸರಕಾರ ಅಧಿಕಾರಕ್ಕೆ ಬರುವ ಮುನ್ನ ಒಳಮೀಸಲಾತಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಎಂ.ವಿರೂಪಾಕ್ಷಿ ಮಾತನಾಡಿ, ‘ಒಳ ಮೀಸಲಾತಿಗಾಗಿ ಅನೇಕ ವರ್ಷಗಳಿದ ಹೋರಾಟದ ಫಲವಾಗಿ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಜಾರಿ ಮಾಡಲು ಅಧಿಕಾರ ನೀಡಿದೆ, ಆದರೂ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದೆ’ ಎಂದು ಖಂಡಿಸಿದರು.
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಬಾರದೆಂಬ ಉದ್ದೇಶದಿಂದ ಸಿದ್ದರಾಮಯ್ಯನವರ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅದನ್ನು ಖಂಡಿಸಿ ನಾಳೆ ರಾಯಚೂರಿಗೆ ಆಗಮಿಸುತ್ತಿರುವ ಸಿಎಂ ಅವರಿಗೆ ಬಂದ್ ಮೂಲಕ ಸ್ವಾಗತ ಕೋರುತ್ತೇವೆ ನಾಳೆ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿಯೇ ಒಳ ಮೀಸಲಾತಿ ಕುರಿತು ಸುಗ್ರಿವಾಜ್ಞೆ ಹೊರಡಿಸಬೇಕು, ನಿರ್ಲಕ್ಷ್ಯ ವಹಿಸಿದ್ದಲ್ಲಿ ಕಲ್ಯಾಣ ಕರ್ನಾಟಕ ಬಂದ್ ಜೊತೆಗೆ ಮುಂದಿನ ದಿನಗಳಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಎಚ್ಚರಿಸಿದರು.
‘ಒಳ ಮೀಸಲಾತಿಗಾಗಿ ರಾಯಚೂರು ಬಂದ್ ಕರೆ ಜಿಲ್ಲೆಗೆ ಸೀಮಿತಗೊಳಿಸದೆ ಮುಂದಿನ ದಿನಗಳಲ್ಲಿ ರಾಜ್ಯ ಬಂದ್‌ಗೆ ಕರೆ ಕೊಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ತಿಳಿಸಿದರು