Breaking News

ಮಲಪ್ರಭಾ ನೀರಾವರಿ ಸಲಹಾ ಸಮಿತಿ ಸಭೆಸಮರ್ಪಕ ನೀರು ಬಿಡುಗಡೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೂಚನೆ

Malaprabha Irrigation Advisory Committee Meeting Minister Lakshmi Hebbalaka’s instruction to release adequate water

ಜಾಹೀರಾತು



ಬೆಳಗಾವಿ, ಜು.30(ಕರ್ನಾಟಕ ವಾರ್ತೆ): ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಿದೆ. ಆದರೆ ಈ ವರ್ಷ ಯಾವುದೇ ತೊಂದರೆ ಇಲ್ಲ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಮುಂದಿನ ವರ್ಷದವರೆಗೆ ರೈತರ ಜಮೀನುಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.
ಸವದತ್ತಿಯ ನವಿಲುತೀರ್ಥದ ಸುಪರಿಂಟೆಂಡಿಂಗ್ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ (ಜು.30) ನಡೆದ ಮಲಪ್ರಭಾ ಯೋಜನೆಯ 2024-25 ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ತಿಂಗಳು ಅಗತಕ್ಕೆ ತಕ್ಕಂತೆ ಯೋಜನೆ ರೂಪಿಸಿ, ಹಳ್ಳ, ಕೆನಾಲ್ ಗಳಿಗೆ ನೀರು ಬಿಡುಗಡೆಗೆ ಅಧಿಕಾರಿಗಳ ಕ್ರಮ ವಹಿಸಬೇಕು. ಕುಡಿಯುವ ನೀರು ಪೂರೈಕೆ ಜೊತೆಗೆ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಜಲಾಶಯಗಳಲ್ಲಿ ನೀರಿನ ಮಟ್ಟ, ಒಳಹರಿವು ಸೇರಿದಂತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀರು ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ಕಳೆದ 50 ವರ್ಷಗಳಲ್ಲಿ ರೇಣುಕಾ ಸಾಗರ ಅಣೆಕಟ್ಟು ನಿರ್ಮಾಣದ ಬಳಿಕ 5 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಅದೇ ರೀತಿಯಲ್ಲಿ ಈ ಬಾರಿಯೂ ರೇಣುಕಾಸಾಗರ ಅಣೆಕಟ್ಟು ಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಸಾಂಪ್ರದಾಯಿಕವಾಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಆ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತವಾಗಿ ನೀರು ಬಿಡುಗಡೆಗೆ ಸೂಚಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನದಿ ಪಾತ್ರಗಳಲ್ಲಿ ಬರುವ ಗ್ರಾಮ ಹಾಗೂ ಪಟ್ಟಣಗಳಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಮಲಪ್ರಭಾ ಎಡದಂಡೆಯ ಕೆರೆಗಳಲ್ಲಿ ನೀರು ತುಂಬಿಸಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ವಿವರಿಸಿದರು.
ಜುಲೈ 2025 ರ ವರೆಗೆ 37 ಟಿಎಂಸಿ ಒಟ್ಟು ಸ್ಟೋರೇಜ್ ಇದ್ದು, ಇದರಲ್ಲಿ 15 ಟಿಎಂಸಿ ಕುಡಿಯುವ ನೀರಿಗೆ ಬಳಕೆ ಆಗಲಿದೆ. ಇನ್ನು ಮಳೆಗಾಲ ಇರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕಾಟಾಚಾರದ ಉತ್ತರ ಕೇಳಿ ಬರುತ್ತಿವೆ. ಇದರಿಂದಾಗಿ ಸಾಕಷ್ಟು ರೈತರಿಗೆ ತೊಂದರೆಯಾಗುತ್ತಿದೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರೊಬ್ಬರು ಮನವಿ ಮಾಡಿಕೊಂಡರು.
ಎಡದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡುತ್ತಿಲ್ಲ. ಎಡದಂಡೆ ಬಲದಂಡೆ ಎರಡು ಕಾಲುವೆಗಳಲ್ಲಿ ನಿಯಮಿತವಾಗಿ ನೀರು ಬಿಡಬೇಕು. ಕೇವಲ ಬಲದಂಡೆಗೆ ಮಾತ್ರ ಹೆಚ್ಚಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಅಂತಹ ದೊರಣೆಯನ್ನು ಬಿಟ್ಟು ರೈತರ ಜಮೀನುಗಳಿಗ ಅಗತ್ಯಕ್ಕೆ ತಕ್ಕಂತೆ ನೀರು ಬಿಡುಗಡೆಗೆ ಮಾಡುವುದರ ಮೂಲಕ ನೀರು ಪೂರೈಕೆ ಆಗಬೇಕು ಎಂದು ರೈತ ಮುಖಂಡರೊಬ್ಬರು ಒತ್ತಾಯಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ್ ಮಾತನಾಡಿ, ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ನೀರು ಬಿಡುಗಡೆಗೆ ಮುನ್ನ ಸಂಗ್ರಹ ಪ್ರಮಾಣ ನೋಡಿಕೊಂಡು ಬರುವ ದಿನಗಳಲ್ಲಿ ನೀರಿನ ಕೊರತೆ ಆಗದಂತೆ ಬಿಡುಗಡೆ ಮಾಡಬೇಕು. ಹಿಂದಿನ ವರ್ಷಗಳಲ್ಲಿ ಅನಗತ್ಯವಾಗಿ ನೀರು ಹರಿಬಿಟ್ಟು ನರಗುಂದ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೊಂದರೆಯಾಗಿದೆ ಹಾಗಾಗಿ ಅಗತ್ಯಕ್ಕೆ ಅನುಗುಣವಾಗಿ ನಿಯಮಿತವಾಗಿ ನೀರು ಬಿಡುಗಡೆಗೆ ಮಾಡಬೇಕು ಎಂದು ತಿಳಿಸಿದರು.
ನೀರು ಬಿಡುಗಡೆಗೆ ಮುನ್ನ ಕಾಲುವೆಗಳ ಸ್ವಚ್ಚತೆ ಕೈಗೊಳ್ಳಬೇಕು. ಇಲ್ಲಿಯವರೆಗೂ ಯಾವೊಂದು ಕಾಲುವೆಗಳ ಸ್ವಚ್ಚತೆ ಪೂರ್ಣಗೊಳಿಸಿಲ್ಲ. ಕೂಡಲೇ ಟೆಂಡರ್ ಕರೆದು ಕಾಲುವೆಗಳ ಸ್ವಚ್ಚತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಪ್ರತಿ ಎರಡು ತಿಂಗಳಿಗೊಮ್ಮೆ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಸಭೆ ಆಯೋಜಿಸಬೇಕು. ಸಚಿವರ ನಿರ್ದೇಶನದಂತೆ ನೀರು ಪೂರೈಕೆ ಕುರಿತು ಯೋಜನೆ ರೂಪಿಸಬೇಕು ಎಂದು ಶಾಸಕ ಸಿ.ಸಿ ಪಾಟೀಲ ನಿರ್ದೇಶನ ನೀಡಿದರು.
ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನವಲಗುಂದ ಶಾಸಕ ಎನ್.ಎಚ್ ಕೋನರೆಡ್ಡಿ, ಮಲಪ್ರಭಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು, ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.