Breaking News

ಒಳಹರಿವು ಆಧರಿಸಿ‌ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆಗೆ ಕ್ರಮ: ಮೊಹಮ್ಮದ ರೋಷನ್

IMG 20240724 WA0324 300x225

ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ‌ ಪ್ರಾಧಿಕಾರದ ಸಭೆ

ಪ್ರವಾಹ ಬಂದರೆ ತಕ್ಷಣವೇ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಜಾಹೀರಾತು

ಬೆಳಗಾವಿ, ಜುಲೈ 24(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹದ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ಎಲ್ಲ ತಹಶೀಲ್ದಾರರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಬೇಕು; ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉಂಟಾಗಬಹುದಾದ ಅತಿವೃಷ್ಟಿ/ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜು.24) ಜರುಗಿದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ‌ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದಲ್ಲದೇ ಬೋಟ್ ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಬೇಕು. ಅಗತ್ಯಬಿದ್ದರೆ ಭಾಡಿಗೆ ಬೋಟ್ ಗಳನ್ನು ಪಡೆಯಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಐದು ಬೋಟ್ ಗಳನ್ನು ಖರೀದಿಸಿ ಅವುಗಳ ಬಳಕೆಯ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸರ್ಚ್ ಲೈಟ್ ಗಳನ್ನು ಕೂಡ‌ ಒದಗಿಸಲಾಗುವುದು ಎಂದು ಹೇಳಿದರು.

ನದಿತೀರದ ಗ್ರಾಮಗಳ ಕುರಿತು ತಹಶೀಲ್ದಾರರಿಂದ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿಗಳು, ಪ್ರವಾಹ ಬಾಧಿತಗೊಳ್ಳಲಿರುವ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿತೀರದ ಗ್ರಾಮಗಳಲ್ಲಿ ತಹಶೀಲ್ದಾರರು, ನೋಡಲ್ ಅಧಿಕಾರಿಗಳು, ಅಗ್ನಿಶಾಮಕ ಮತ್ತು ಪೊಲೀಸ್ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ತಿಳಿಸಿದರು.

ಮಂಗಾವತಿ, ಜುಗೂಳ, ಶಿರಗುಪ್ಪಿ, ಕುಸನಾಳ, ಬಳಜಿವಾಡ, ಮುಳವಾಡ, ಉಗಾರ್, ಯಡೂರ, ಮಾಂಜರಿ, ತಂಗಡಗಿ, ಶಿನಾಳ, ಝಂಜರವಾಡ, ಸತ್ತಿ, ಸವದಿ, ನಾಗನೂರ ಪಿ.ಕೆ., ಬಳವಾಡ, ಭಿಂವಶಿ, ಕೋಡಣಿ, ಭೋಜ್, ಹೊನ್ನುರಗಿ ಹಾಗೂ ತೋಟದ ವಸತಿ ಸೇರಿದಂತೆ ಕಳೆದ ಬಾರಿ ಪ್ರವಾಹದಿಂದ ಬಾಧಿತಗೊಂಡಿದ್ದ ಗ್ರಾಮಗಳ ಪರಿಸ್ಥಿತಿ ಮೇಲೆ ನಿರಂತರ ನಿಗಾ ವಹಿಸಬೇಕು ಎಂದರು.
ಘಟಪ್ರಭಾ ನದಿ ಪ್ರವಾಹದಿಂದ ಬಾಧಿತಗೊಳ್ಳಲಿರುವ ಬಸನಾಳ, ಕೋಟನಾಳ, ಇದಲ್ಲದೇ ಸಂಕೇಶ್ವರದ ನದಿಗಲ್ಲಿ, ಕುಂಬಾರ ಓಣಿ ಮತ್ತಿತರ ಪ್ರದೇಶಗಳಲ್ಲಿಯೂ ನಿಗಾ ವಹಿಸಬೇಕು ಎಂದರು.
ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೆ ಕ್ರಮ:

ನಮ್ಮ ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಘಟಪ್ರಭಾ ಜಲಾಶಯದಲ್ಲಿ ಸದ್ಯದ ಶೇ.80 ರಷ್ಟು ಸಂಗ್ರಹಮಟ್ಟವನ್ನು ಆಧರಿಸಿ ಇಂದಿನಿಂದ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುಗಡೆಯ ಕುರಿತು ನಿರ್ಧರಿಸಲಾಗುವುದು.
ನೀರು ಬಿಡುಗಡೆಯ ಕುರಿತು ಎಲ್ಲ ತಹಶೀಲ್ದಾರರು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಾದ್ಯಂತ ಅನೇಕ ತಳಮಟ್ಠದ ಸೇತುವೆಗಳು ಮುಳುಗಡೆಯಾಗಿದ್ದು, ಸುರಕ್ಷತಾ ದೃಷ್ಟಿಯಿಂದ‌ ಬ್ಯಾರಿಕೇಡ್ ಅಳವಡಿಸಲಾಗಿರುತ್ತದೆ. ಬಹುತೇಕ ಕಡೆಗಳಲ್ಲಿ ಪರ್ಯಾಯ ರಸ್ತೆಗಳಿವೆ. ಆದಾಗ್ಯೂ ಪ್ರತಿಯೊಂದು ಸೇತುವೆಗಳ ಕಡೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

IMG 20240724 WA0317 474x1024

ಹೆದ್ದಾರಿ ಕಾಮಗಾರಿ; ಭೂಕುಸಿತ ಎಚ್ಚರಿಕೆ ವಹಿಸಲು ನಿರ್ದೇಶನ:

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಕಾರ್ಮಿಕರ ವಸತಿ ಶೆಡ್, ಡಾಬಾ, ಸಣ್ಣಪುಟ್ಟ ಅಂಗಡಿಗಳು ಕಂಡುಬಂದಿರುತ್ತವೆ. ಭೂಕುಸಿತ ಉಂಟಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ‌ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬೆಳಗಾವಿ ನಗರದಲ್ಲಿಯೂ ಚರಂಡಿ, ಗಟಾರುಗಳನ್ನು ಸ್ವಚ್ಛಗೊಳಿಸಿ ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ನಗರ ಪ್ರದೇಶ ಸೇರಿದಂತೆ ಪಾಶ್ವಾಪುರ, ಹಗೇದಾಳ, ಬಗರನಾಳ, ಅಂಕಲಗಿ ಮತ್ತಿತರ ಕಡೆ ಬಳ್ಳಾರಿ ನಾಲಾದಿಂದ‌ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಆಹಾರ ಸಾಮಗ್ರಿ ದಾಸ್ತಾನು ಖಚಿತಪಡಿಸಲು ನಿರ್ದೇಶನ:

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನದಿತೀರದ ಗ್ರಾಮಗಳ ಜತೆಗೆ ತೋಟದ ವಸತಿಗಳ ಮೇಲೆಯೂ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಕೇಶ್ವರ, ಯಮಕನಮರಡಿ ಬಳಿ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ನಡೆಯುತ್ತಿರುವ ಅನೇಕ‌ ಕಡೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳನ್ನು ಕೊರೆಯಲಾಗಿರುತ್ತದೆ. ಇಂತಹ ಕಡೆ ಭೂಕುಸಿತದ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿದರು.

ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಗರ್ಭಿಣಿ‌ ಮಹಿಳೆಯರು ಹಾಗೂ ಹಿರಿಯ ನಾಗರಿಕರ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು.
ಅಂಗನವಾಡಿ, ಶಾಲೆಗಳಲ್ಲಿ ಆಹಾರ ಪದಾರ್ಥಗಳ ದಾಸ್ತಾನು ಇರುವುದನ್ನು‌ ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ರಾಹುಲ್ ಶಿಂಧೆ ಸೂಚನೆ ನೀಡಿದರು.

ತುರ್ತು ಕಾರ್ಯಾಚರಣೆ; ಸಿದ್ಧತೆ ಪರಿಶೀಲನೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ನದಿತೀರದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಲಾಗಿದ್ದು, ಎನ್.ಡಿ.ಆರ್.ಎಫ್., ಅಗ್ನಿಶಾಮಕ‌ದಳ‌ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ಕೆಲವು ಕಡೆ ಮೊಸಳೆಗಳು ಕಂಡುಬಂದಿರುವುದರಿಂದ‌ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ನಾಗರಿಕರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಬೀಟ್ ಸಿಬ್ಬಂದಿ ಪ್ರವಾಹ ಪರಿಸ್ಥಿತಿ ಬಗ್ಗೆ ನಿಗಾ ವಹಿಸಬೇಕು ಎಂದು ಡಾ.ಭೀಮಾಶಂಕರ ಸೂಚನೆ ನೀಡಿದರು.

ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ದಿನೇಶ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪ ವಿಭಾಗಾಧಿಕಾರಿಗಳು, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
****ವ್ಯಾಪಕ ಮಳೆ: ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಜುಲೈ 25 ಹಾಗೂ ಜುಲೈ 26 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಜಿಲ್ಲಾಧಿಕಾರಿ ಶ್ರೀ ಮೊಹಮ್ಮದ ರೋಷನ್‌ ರವರು ಜಿಲ್ಲಾ ವರಿಷ್ಠಾಧಿಕಾರಿ, ಶ್ರೀ ಭೀಮಾಶಂಕರ ಗುಳೇದ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ರಾಹುಲ್‌ ಶಿಂಧೆ ಮತ್ತು ಪರೀಕ್ಷಾರ್ಥ ಐಎಎಸ್‌ ಅಧಿಕಾರಿ, ಶ್ರೀ ದೀನೇಶ್‌ಕುಮಾರ ಮೀನಾ ಇವರೊಂದಿಗೆ ಗೋಕಾಕ ತಾಲೂಕಿನ ಲೋಳಸೂರ್‌ ಬ್ರಿಡ್ಜ್‌ ಗೆ ಭೇಟಿ ನೀಟಿ ಘಟಪ್ರಭಾ ನದಿಯ ನೀರಿನ ಮಟ್ಟ ಪರೀಶಿಲಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಗತ್ಯ ವ್ಯವಸ್ಥೆಗೆ ಸೂಚಿಸಲಾಯಿತು.ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ, ಮೊಹಮ್ಮದ್ ರೋಷನ್ ರವರು ಪ್ರಾಧಿಕಾರದ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಬೆಳಗಾವಿ ಜಿಲ್ಲೆಯಲ್ಲಿನ ಪ್ರಸ್ತುತದ ವ್ಯಾಪಕ ಮಳೆಯ ಸ್ಥಿತಿಗತಿ ಹಾಗೂ ನದಿಯ ನೀರಿನ ಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.