Breaking News

371ಜೆ ಸಮರ್ಪಕ ಅನುಷ್ಠಾನ,ನ್ಯಾಯಸಮ್ಮತ ಅವಕಾಶಕ್ಕಾಗಿ ಆಗ್ರಹಿಸಿ ಪ್ರತಿಭಟನೆ

Protest demanding proper implementation of 371J, fair opportunity

ಜಾಹೀರಾತು


ಕೊಪ್ಪಳ: ೩೭೧(ಜೆ) ಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಮತ್ತು ೩೭೧(ಜೆ) ರದ್ದು ಪಡಿಸುವಂತೆ ಮಾಡಿದ ಹೋರಾಟ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

೩೭೧(ಜೆ) ಮೀಸಲಾತಿಯನ್ನು ಯಾವುದೋ ಸರ್ಕಾರ, ಯಾವುದೋ ಪಕ್ಷ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕದ ಜನರಿಗೆ ನೀಡಿದ ಸಂವಿಧಾನಬದ್ಧ ಹಕ್ಕು. ಯಾವ ಪ್ರದೇಶಕ್ಕೆ ಏನು ಅವಶ್ಯವೋ ಅದನ್ನು ಕೊಡಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಹಾಗಾಗಿ ೩೭೧(ಜೆ) ಅವಶ್ಯತೆ ಇತ್ತು. ಅದನ್ನು ಪಡೆದಿದ್ದೇವೆ. ಸಂವಿಧಾನ ತಿದ್ದುಪಡಿ ಸೇರಿದ್ದು, ಇದನ್ನು ರದ್ದು ಮಾಡಲು ಬಿಡುವುದಿಲ್ಲ. ಅನುಷ್ಠಾನ ಆರಂಭವಾದಾಗಲೇ ವಿರೋಧ ಮಾಡಲಾಗುತ್ತಿದೆ. ಬೆಳಗಾವಿಯ ಕೆ.ಎಲ್.ಇ ಎಜ್ಯುಕೇಷನ್ ಸೊಸೈಟಿ, ಮೈಸೂರಿನ ಜೆಎಸ್ಎಸ್, ಮಂಗಳೂರಿನ ಮಣಿಪಾಲ್ ವಿಶ್ವವಿದ್ಯಾಲಯ, ರಾಯಚೂರಿನ ನವೋದಯ ಕಾಲೇಜಿನವರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡುವುದಿಲ್ಲ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ವಿರೋಧ ಶಕ್ತಿಗಳು ನಮ್ಮ ಜೊತೆಗಿದ್ದು, ನಮಗೆ ಚೂರಿ ಹಾಕುವವರಿದ್ದಾರೆ. ಹಾಗಾಗಿ ಎಚ್ಚರಿಕೆ ವಹಿಸಬೇಕು ಎಂದು ೩೭೧(ಜೆ) ಹೋರಾಟಗಾರ ರಜಾಕ್ ಉಸ್ತಾದ್ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗ ನೇಮಕಾತಿಯಲ್ಲಿ ಮಿಕ್ಕುಳಿದ ವೃಂದದಲ್ಲಿ ಅರ್ಜಿ ಹಾಕುವ ಹಕ್ಕನ್ನು ನೀಡಬಾರದು ಎಂದು ಕಲ್ಯಾಣ ಕರ್ನಾಟಕ ಮೀಸಲಾತಿ ಅನುಷ್ಠಾನ ಸಂಪುಟ ಉಪಸಮಿತಿಯ ಅಧ್ಯಕ್ಷರಾಗಿದ್ದ ಗೋವಿಂದ ಕಾರಜೋಳ, ಮಾಧುಸ್ವಾಮಿ, ಬಿ.ಶ್ರೀರಾಮುಲು ಮತ್ತು ಪ್ರಸ್ತುತ ಅಧ್ಯಕ್ಷ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಕೂಡಾ ಪತ್ರ ಬರೆದಿದ್ದಾರೆ. ಹಾಗಾಗಿ ಕಾನೂನು ಸಚಿವರೇ ಮಿಕ್ಕುಳಿದ ವೃಂದದವರಿಗೆ ಅನ್ಯಾಯವಾಗುತ್ತದೆ ಎನ್ನುತ್ತಿದ್ದಾರೆ. ಹಾಗಾಗಿ ಅದನ್ನು ತೆಗೆಯಬೇಕು ಎಂದು ಹಸಿರು ಪ್ರತಿಷ್ಠಾನದವರು ಹೋರಾಟ ಮಾಡುತ್ತಿದ್ದಾರೆ. ಇದನ್ನು ತೀವ್ರವಾಗಿ ವಿರೋಧ ಮಾಡುತ್ತೇವೆ. ಸರ್ಕಾರ ಯಾವುದೇ ಇರಲಿ, ಆಡಳಿತ ವರ್ಗ ನಮ್ಮ ವಿರುದ್ಧ ಕೆಲಸ ಮಾಡುತ್ತಿದೆ. ಶಿಕ್ಷಕರ ನೇಮಕಾತಿ ಹೊರತುಪಡಿಸಿ, ಯಾವುದೇ ನೇಮಕಾತಿಗೆ ಸಣ್ಣ ಆದೇಶ ನೀಡಿಲ್ಲ. ಏಕೆಂದರೆ ಅಕ್ಕಪಕ್ಕದ ಜಿಲ್ಲೆಗಳ ಜನರು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಬಿಹಾರ್, ಆಂಧ್ರಪ್ರದೇಶ, ತೆಲಂಗಾಣ ಸೇರಿ ಬೇರೆ ರಾಜ್ಯಗಳ ಜನರು ಸಿಎಂ ಹಾದಿಯಾಗಿ ಬೀದಿಗಳಿದು ಹೋರಾಟ ಮಾಡಿದರೂ, ೩೭೧(ಜೆ) ಸಿಗುತ್ತಿಲ್ಲ. ಹಾಗಾಗಿ ನಮ್ಮ ಸಿಕ್ಕಿರುವ ಹಕ್ಕು ಬಿಡಬಾರದು ಎಂದು ಅವರು ಆಗ್ರಹಿಸಿದರು.

೩೭೧(ಜೆ) ಬಹುದಿನಗಳ ಕನಸು. ಇದಕ್ಕೆ ವೈಜನಾಥ ಪಾಟೀಲ್ ಮುಂಚೂಣಿಯ ಹೋರಾಟಗಾರರು. ಯಾವುದೇ ಸರ್ಕಾರ ಬಂದರೂ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಉಪಸಮಿತಿಯವರು ಅಧ್ಯಕ್ಷರಾದವರು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ಕಾರಜೋಳ, ಮಾಧುಸ್ವಾಮಿ, ಯಾರೇ ಆಗಲಿ ನಮ್ಮ ಮಕ್ಕಳಿಗೆ ಸಿಗಬೇಕಾದ ನ್ಯಾಯ ಸಿಗಬೇಕು. ೩೭೧(ಜೆ) ರದ್ದು ಮಾಡಿ ಎಂದು ಹಸಿರು ಪ್ರತಿಷ್ಠಾನದವರು ಹೋರಾಟ ಮಾಡುತ್ತಿದ್ದಾರೆ. ಏಕೆಂದರೆ ಅವರು ನಮ್ಮ ಇತಿಹಾಸ ತಿಳಿದಿಲ್ಲ. ದೇಶದ ಎಲ್ಲರೂ ಬ್ರಿಟಿಷರು ಆಡಳಿತ ಮಾಡುತ್ತಿದ್ದರು. ಆದರೆ ನಮ್ಮ ಭಾಗ ನಿಜಾಮರ ಆಡಳಿತದಲ್ಲಿತ್ತು, ಹಾಗಾಗಿ ಶಿಕ್ಷಣ, ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೆವು. ಹಾಗಾಗಿ ಹೋರಾಟ ಮಾಡಿದೆವು. ೩೭೧(ಜೆ) ಬರಲು ಸಿಕ್ಕಿತ್ತು. ಇದಕ್ಕೆ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರಣ. ೩೭೧(ಜೆ) ಸಮರ್ಪಕ ಅನುಷ್ಠಾನ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕ ಮೀಸಲಾತಿ ಅನುಷ್ಠಾನ ಉಪಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಕೆಲಸ ಮಾಡುತ್ತಿಲ್ಲ. ಈ ಭಾಗ ಅಭಿವೃದ್ಧಿ ಆಗಬಾರದು ಎಂಬ ಹುನ್ನಾರ ಇದೆ. ನಾವು ರಾಜ್ಯ ಹೊಡೆಯುವ ಕೆಲಸ ಮಾಡುವುದಿಲ್ಲ. ನ್ಯಾಯ ಸಿಗದಿದ್ದರೇ ಅದರ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಎಚ್ಚರಿಕೆ ನೀಡಿದರು.

ಹಿಂದೆ ಪಡೆಯಲು ಮಾಡಿದ್ದೇವೆ. ಈಗ ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ಬೇರೆ ಭಾಗದವರಿಗೆ ನಾವು ಅಭಿವೃದ್ಧಿ ಆಗುತ್ತಿರುವುದನ್ನು ತಡೆದುಕೊಳ್ಳಲಾಗುತ್ತಿಲ್ಲ. ನೀವು ಎಷ್ಟು ಅಭಿವೃದ್ಧಿ ಆದರೂ ನಾವು ಕೇಳಿಲ್ಲ. ರಾಜ್ಯ ಒಡೆಯುವ ಉದ್ದೇಶ ನಮಗಿಲ್ಲ. ಮಲತಾಯಿ ಧೋರಣೆ ತೋರಿದರೆ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯದ ಬಾವುಟ ಹಾರಿಸಬೇಕಾಗುತ್ತದೆ ಎಂದು ಗುಲಬುರ್ಗಾದ ಗೌತಮ್ ವೈಜನಾಥ ಪಾಟೀಲ್ ಎಚ್ಚರಿಸಿದರು.

ನಗರದ ತಾಲ್ಲೂಕು ಕ್ರೀಡಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅಶೋಕ ವೃತ್ತ ಮಾರ್ಗಾವಾಗಿ ಹೊಸಪೇಟೆ ರಸ್ತೆಯ ಮೂಲಕ ಬಸವೇಶ್ವರ ವೃತ್ತದ ವರಗೆ ಜರುಗಿತು. ಸಮಿತಿಯ ಪದಾಧಿಕಾರಿಗಳು ಡಿಯುಡಿಸಿ ರೇಷ್ಮಾಗೆ ಮನವಿ ಸಲ್ಲಿಸಿದರು.

ಸಮಿತಿಯ ಯುವ ಘಟಕದ ಜಿಲ್ಲಾಧ್ಯಕ್ಷ ರಮೇಶ ತುಪ್ಪದ್, ಸಂಚಾಲಕರಾದ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ಉಪಾಧ್ಯಕ್ಷ ಹುಲುಗಪ್ಪ ಕಟ್ಟಿಮನಿ, ಹಿರಿಯ ವಕೀಲರಾದ ರಾಘವೇಂದ್ರ ಪಾನಘಂಟಿ, ಆಸೀಫ್ ಅಲಿ, ಪೀರಾಹುಸೇನ್ ಹೊಸಳ್ಳಿ, ವಿ.ಎಂ.ಭೂಸನೂರಮಠ, ಸಂಧ್ಯಾ ಮಾದಿನೂರು, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಾಣಿಜ್ಯೋದ್ಯಮಿ ಶ್ರೀನಿವಾಸ್ ಗುಪ್ತಾ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ವೀರೇಶ ಮಹಾಂತಯ್ಯನಮಠ, ರಾಜ್ಯ ಯುವ ಕಾರ್ಯಾಧ್ಯಕ್ಷ ರಾಜು ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಸುನೀಲ್ ಹೆಸರೂರು, ಗಣೇಶ ಹೊರತಟ್ನಾಳ್, ಬಸವರಾಜ ಬೊಳ್ಳೊಳ್ಳಿ, ಕೃಷ್ಣ ಕಬ್ಬೇರ್,ಮಂಜುನಾಥ ಜಿ. ಗೊಂಡಬಾಳ, ಸಾವಿತ್ರಿ ಮುಜುಮದಾರ್, ಮಹಾಲಕ್ಷ್ಮಿ ಕಂದಾರಿ ಇದ್ದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.