Hogenakkal Falls in the border district is temporarily closed for tourists.
ವರದಿ : ಬಂಗಾರಪ್ಪ ಸಿ .
ಹನೂರು :ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಸುರಿಯುತ್ತಿದ್ದು, ನೀರಿನ ಪ್ರಮಾಣವು ಉಕ್ಕಿ ಹರಿಯುತ್ತಿರುವುದರಿಂದ ನೀರಿನ ಹರಿವು ಕಡಿಮೆಯಾಗುವ ತನಕ ಹೊಗೆನಕಲ್‌ಗೆ ತೆರಳುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶ ಇರುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ .
ದೇಶದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಾದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಅಪಾಯ ಮಟ್ಟದಲ್ಲಿ ನೀರು ಭೋರ್ಗರೆಯುತ್ತಿದೆ. ಕಬಿನಿ ಹೊರಹರಿವು ಮತ್ತು ಭಾರಿ ಮಳೆಯಿಂದ ಹೊಗೆನಕಲ್‌ನಲ್ಲಿ ಕಾವೇರಿ ರೌದ್ರ ನರ್ತನವಾಡುತ್ತಿದ್ದಾಳೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ವನ್ಯಜೀವಿಧಾಮವು ಜು.22 ರಿಂದ ಹೊಗೆನಕಲ್‌ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ಈಗಾಗಲೇ ಕಬಿನಿಯಿಂದ 70 ಸಾವಿರ ಕ್ಯೂಸೆಕ್ ಹೊರಹರಿವಿದ್ದು ಹೊಗೆನಕಲ್‌ನಲ್ಲಿ ಕಾವೇರಿ ರಭಸದಿಂದ ಹರಿಯುತ್ತಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ನೀರಿನ ಹರಿವು ಕಡಿಮೆಯಾಗುವ ತನಕ ಹೊಗೆನಕಲ್‌ಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ತಾತ್ಕಾಲಿಕ ನಿರ್ಬಂಧ ಇದ್ದು ಅದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೊಗೆನಕಲ್ ಆರ್‌ಎಫ್ ಒ ಸಂಪತ್ ಪಟೇಲ್ ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು ಎರಡೂ ರಾಜ್ಯದ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ಕೊಡುವ ಜನಪ್ರಿಯ ಜಲಪಾತ ಇದಾಗಿದ್ದು, ಕಳೆದ 4 ದಿನದಿಂದ ತಮಿಳುನಾಡು ಭಾಗದಲ್ಲಿ ಬೋಟಿಂಗ್, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಜು.22 ರಿಂದ ಕರ್ನಾಟಕದ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ ಎಂದು ತಿಳಿಸಲಾಗಿದೆ .