ಕನಕಗಿರಿ: ಸಮೀಪದ ಪರಾಪುರ ಗ್ರಾಮದ ರೈತ ಶಂಕ್ರಪ್ಪ ಕುರಿ ಎಂಬುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಕರಡಿ ಶನಿವಾರ ನಸುಕಿನ ಜಾವ ನೀರ್ಲೂಟಿ ರಸ್ತೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು ಜನ ಆತಂಕ ಪಡುವಂತಾಗಿದೆ.
ಇಂಗಳದಾಳ, ಪರಾಪುರ, ರಾಂಪುರ, ಬಸರಿಹಾಳ, ಪ್ರವಾಸಿ ಮಂದಿರದ ರಸ್ತೆಯಲ್ಲಿ ಕಳೆದ ಹದಿನೈದು ದಿನಗಳಿಂದಲೂ ಓಡಾಡುತ್ತಿರುವ ಕರಡಿಯನ್ನು ಸಾಕಷ್ಟು ಜನ ನೋಡಿ ಭಯ ಭೀತರಾಗಿದ್ದು ಯಾವ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡುವದೋ ಎನ್ನುವ ಆತಂಕದಲ್ಲಿ ಜನ ಜೀವನ ನಡೆಸುವಂತಾಗಿದೆ.
ನೀರ್ಲೂಟಿ ಗ್ರಾಮದ ರಸ್ತೆಯಲ್ಲಿರುವ ನೀಲಕಂಠಗೌಡ ಪಾಟೀಲ ಅವರ ಹೊಲದಲ್ಲಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು ವಿಜಯಪುರ, ಬಾಗಲಕೋಟೆ, ರಾಯಚೂರು ಮೂಲದ ಕಾರ್ಮಿಕರು ವಾಸವಾಗಿದ್ದಾರೆ, ನಸುಕಿನ ಜಾವ ಕರಡಿ ಕಂಡ ಮಹಿಳೆಯೊಬ್ಬರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೆ ಎಚ್ಚೆತ ಅಲ್ಲಿನ ನಿವಾಸಿಗಳು ಕೈಯಲ್ಲಿ ಕಟ್ಟಿಗೆ ಕಬ್ಬಿಣದ ಸರಳು ಹಿಡಿದುಕೊಂಡು ಬೆನ್ನತ್ತಿದ್ದರೂ ಕರಡಿ ಸಿಗಲಿಲ್ಲ, ಕೆಲವರು ತಮ್ಮ ಮೊಬೈಲ್ ನಲ್ಲಿ ಕರಡಿ ಓಡಾಟದ ವಿಡಿಯೋ ಸೆರೆ ಹಿಡಿದಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಕರಡಿ ಈ ಭಾಗದಲ್ಲಿ ಓಡಾಡುತ್ತಿರುವದರಿಂದ ರಾತ್ರಿ ಇಡೀ, ನಾಯಿಗಳು ಬೋಗಳುತ್ತಾ ಓಡಾಡುತ್ತವೆ.
ಶನಿವಾರ ನಸುಕಿನ ಜಾವ ಮಹಿಳೆಯೊಬ್ಬರು ಕಣ್ಣಾರೆ ಕಂಡಿದ್ದು ಆತಂಕಮೂಡಿಸಿದೆ ಎಂದು ಕಾರ್ಮಿಕ ಮಂಜುನಾಥ ತಿಳಿಸಿದರು.
ಅರಣ್ಯ ಇಲಾಖೆಯವರು ಆದಷ್ಟು ತೀವ್ರ ಗತಿಯಲ್ಲಿ ಕರಡಿಯನ್ನು ಬಂಧಿಸಬೇಕು ಎನ್ನುವದು ಅಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.
ವರದಿ : ಪಂಚಯ್ಯ ಹಿರೇಮಠ ಕೊಪ್ಪಳ,,,,