ಗಂಗಾವತಿ: ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.ನಾಮ ಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರದ ಹೊತ್ತಿಗೆ ಒಟ್ಟು ಆರು ನಾಮ ಪತ್ರಗಳು ಸಲ್ಲಿಕೆಯಾಗಿವೆ. ನ್ಯಾಯವಾದಿ ಗಿರೇಗೌಡ ಹೊಸ್ಕೇರಿ,ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ,ಮನೋಹರ ಗೌಡ,ಶಂಕರಗೌಡ ಹೊಸಳ್ಳಿ, ಸಿದ್ದಾಪೂರ ರಾಚಪ್ಪ, ಮಹಾಲಿಂಗಪ್ಪ ಬನ್ನಿಕೊಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಸಮಾಜದ ಕೆಲವು ಪ್ರಮುಖರು ಅವಿರೋಧ ಆಯ್ಕೆಗೆ ಸಾಕಷ್ಟು ಕಸರತ್ತು ನಡೆಸಿದ್ದರು.ಶಂಕರಗೌಡ ಹೊಸಳ್ಳಿ, ಮಹಾಲಿಂಗಪ್ಪ ಬನ್ನಿಕೊಪ್ಪ ,ಶಾಂತಮಲ್ಲಯ್ಯ,ದೊಡ್ಡಪ್ಪ ದೇಸಾಯಿ ಇವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು.
ಮತದಾರರ ಪಟ್ಟಿಯಲ್ಲಿ ಹೊಸಳ್ಳಿ ಶಂಕರಗೌಡ ಅವರ ಹೆಸರು ಇಲ್ಲವಾಗಿತ್ತು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮುತುವರ್ಜಿವಹಿಸಿ, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಂಡು ನಾಮಪತ್ರ ಸಲ್ಲಿಸಲು ಅನುವು ಮಾಡಿ ಕೊಟ್ಟಿದ್ದಾರೆ. ಆದರೆ ಶಾಂತಮಲ್ಲಯ್ಯ ಅವರ ಹೆಸರನ್ನು ಕೈ ಬಿಟ್ಟದ್ದು ಜಂಗಮ ಸಮಾಜದವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಮ ಸ್ವಾಮಿ,ಶಾಂತಮಲ್ಲಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ಕಳೆದ ಚುನಾವಣೆಯಲ್ಲಿ ಅಶೋಕಸ್ವಾಮಿ ಹೇರೂರ ಮತ್ತವರ ತಂಡದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.ಆದರೆ ಈ ಸಾರಿ ಮಾತ್ರ ನಾಮ ಪತ್ರ ಸಲ್ಲಿಕೆ ರಂಗೇರಿದ್ದು, ಅವಿರೋಧ ಆಯ್ಕೆ ಸುಲಭವಾಗುತ್ತಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಾಮ ಪತ್ರ ಸಲ್ಲಿಕೆಯ ಮೊದಲು,ಅವಿರೋಧ ಆಯ್ಕೆಗೆ ಚರ್ಚೆ ನಡೆದಿತ್ತಾದರೂ,ನಾಮ ಪತ್ರ ಸಲ್ಲಿಕೆಯಾದ ನಂತರ ಈ ಬಗ್ಗೆ ಆಸಕ್ತರ ಸಂಖ್ಯೆ ತಿಳಿಯಲಿದ್ದು,ನಂತರ ಅವಿರೋಧ ಆಯ್ಕೆಯ ಬಗ್ಗೆ ಚರ್ಚಿಸೋಣ ಎಂದು ಅಶೋಕಸ್ವಾಮಿ ಹೇರೂರ, ಗಿರೇಗೌಡ ಹೊಸ್ಕೇರಿ, ಶಿವರಾಮಗೌಡ ಅವರು ಅಭಿಪ್ರಾಯ ಪಟ್ಟಿದ್ದರಿಂದ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇಪ್ಪತ್ತು ಜನರ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆ ಬಹುತೇಕ ಅವಿರೋಧವಾಗಲಿದ್ದು,ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ ಅಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದೆ.