Breaking News

ಕೊಲ್ಲಿನಾಗೇಶ್ವರರಾವ್ ಸರಕಾರಿಮಹಾವಿದ್ಯಾಲಯದಲ್ಲಿ ಪ್ರವೇಶಕ್ಕೆ ವಿದ್ಯಾರ್ಥಿಗಳನಿರಾಸಕ್ತಿ?


*ಪ್ರವೇಶ ಶುಲ್ಕ ಭರಿಸಲು ಹೋಗಬೇಕಿದೆ 5ಕಿ.ಮೀ.ದೂರದ ಬ್ಯಾಂಕಿಗೆ.
*ಶುದ್ದಕುಡಿಯುವ ನೀರು ಸೇರಿ ಮಹಿಳಾಶೌಚಾಲಯದ ಕೊರತೆ
*ಮುಗಿಯದ ಪದವಿ ಪ್ರವೇಶ ಆನ್ ಲೈನ್ ,ಆಫ್ ಲೈನ್ ಗೊಂದಲ.
*ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗಲು ಇಲ್ಲ ಬಸ್ ವ್ಯವಸ್ಥೆ.
*ಸರಿಯಾಗಿ ನಡೆಯದ ಪಾಠಪ್ರವಚನ
.


ವಿಶೇಷ ವರದಿ
ಗಂಗಾವತಿ: ಗ್ರಾಮೀಣ ಭಾಗದ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪಿಸಿದೆ .
ಅದರಂತೆ ತಾಲೂಕ ಮಟ್ಟದಲ್ಲಿರುವ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಅತ್ಯುತ್ತಮವಾದ ಕೋರ್ಸ್ ಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದೆ .ಆದರೆ ಗಂಗಾವತಿ ನಗರದಲ್ಲಿರುವ ಕೊಲ್ಲಿ ನಾಗೇಶ್ವರ ಸರಕಾರಿ ಮಹಾವಿದ್ಯಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಮತ್ತು ಮಹಿಳಾ ಶೌಚಾಲಯದ ಕೊರತೆ ಸೇರಿ ಹಲವು ಕೊರತೆಗಳ ಪರಿಣಾಮವಾಗಿ 2024 -25 ನೇ ಸಾಲಿನ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳು ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಪದವಿ ಶೈಕ್ಷಣಿಕ ವರ್ಷದ ಆರಂಭ ಇದೀಗ ಆಗುತ್ತಿದ್ದು ಪದವಿ ಪ್ರವೇಶಕ್ಕೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿಯಮವನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಆದೇಶವನ್ನು ಮಾಡಿಲ್ಲ .ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳು ಆಫ್ ಲೈನ್ ಮೂಲಕ ವಿದ್ಯಾರ್ಥಿಗಳ ಪ್ರವೇಶ ನೀಡಿ ಎಲ್ಲ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಮೌಖಿಕ ಆದೇಶ ನೀಡಿದರೂ ಪ್ರಾಚಾರ್ಯರ ನಿರಾಸಕ್ತಿಯ ಪರಿಣಾಮ ಕೊಲ್ಲಿ ನಾಗೇಶ್ವರರ ಸರಕಾರಿ ಮಹಾವಿದ್ಯಾಲಯದಲ್ಲಿ ಇದುವರೆಗೂ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರವೇಶಗಳು ಆಗಿಲ್ಲ ಎನ್ನುವ ಮಾಹಿತಿ ಇದೆ. 2022-23 ನೇ ಸಾಲಿನಲ್ಲಿ
ಪದವಿ ಕಲಾ ವಿಭಾಗ 375, ವಾಣಿಜ್ಯ 76, ಬಿಬಿಎ 34, ವಿಜ್ಞಾನ ವಿಭಾಗ 124 ಹಾಗೂ 2023-24 ರಲ್ಲಿ ಕಲಾ ವಿಭಾಗ 329,ವಾಣಿಜ್ಯ 69 ,ಬಿಬಿಎ 32 ಮತ್ತು ವಿಜ್ಞಾನ ವಿಭಾಗ 131 ಪ್ರವೇಶ ನೀಡಲಾಗಿತ್ತು.
2024-25ನೇಯ ಸಾಲಿನ ಜೂನ್ ತಿಂಗಳು ಕಳೆಯುತ್ತಾ ಬಂದರೂ ವಿವಿಧ ವಿಭಾಗದ ಪದವಿ ಕೋರ್ಸ್ ಗೆ ಪ್ರವೇಶಗಳು ಆಗುತ್ತಿಲ್ಲ. ಸುಮಾರು 60 ವಿದ್ಯಾರ್ಥಿಗಳು ಅಪ್ಲಿಕೇಶನ್ ತೆಗೆದುಕೊಂಡು ಹೋಗಿದ್ದರೂ ಪ್ರವೇಶ ಪಡೆಯುವಂತೆ ಕಾಲೇಜಿನಿಂದ ಕರೆ ಮಾಡಿದರೆ ಬೇರೆ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.
ಆದರೆ ಕನಕಗಿರಿ,ಬಂಡಿ ಹರ್ಲಾಪೂರ,ಶ್ರೀರಾಮನಗರ,ಇರಕಲ್ ಗಡಾ ಸರಕಾರಿ ಮಹಾವಿದ್ಯಾಲಯ ಸೇರಿ ಖಾಸಗಿ ಪದವಿ ಮಹಾವಿದ್ಯಾಲಗಳಲ್ಲಿ ಈಗಾಗಲೇ ಶೇ.60 ರಷ್ಟು ಪ್ರವೇಶ ಮುಕ್ತಾಯವಾಗಿವೆ.
ಪ್ರವೇಶ ಶುಲ್ಕ ಪಾವತಿಸಲು 5 ಕಿ.ಮೀ.ದೂರ ಹೋಗಬೇಕಿದೆ: ಕೊಲ್ಲಿ ನಾಗೇಶರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿ ಪ್ರವೇಶ ಮಾಡಿಸಬೇಕಾದರೆ ವಿದ್ಯಾರ್ಥಿಗಳು ಸರ್ಕಸ್ ಮಾಡಬೇಕಿದೆ.ಯುಯುಸಿಎಂಎಸ್ ಆನ್ ಲೈನ್ ಇರದಿದ್ದರೂ ಆಫ್ ಲೈನ್ ಮೂಲಕವೂ ಪ್ರವೇಶ ನೀಡುವಂತೆ
ಈಗಾಗಲೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಕೊಪ್ಪಳ ವಿವಿ ಕುಲಪತಿ ಒಂದು ತಿಂಗಳು ಮುಂಚೆ ಆನ್ ಲೈನ್ ಮೀಟಿಂಗ್ ನಲ್ಲಿ ಮೌಖಿಕ ಆದೇಶ ನೀಡಿದರೂ ಪದವಿ ಪ್ರವೇಶ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ.
ಗ್ರಾಮೀಣ ಭಾಗದಿಂದ ಕಾಲೇಜಿಗೆ ಹೋಗಲು ಬಸ್ ನಿಲ್ದಾಣದಿಂದ ಹೋಗಲು ಬಸ್ ವ್ಯವಸ್ಥೆ ಸರಿಯಿಲ್ಲ. ಪ್ರವೇಶ ಶುಲ್ಕ ಭರಿಸಲು ಕಾಲೇಜಿನಿಂದ 5 ಕಿ.ಮೀ.ದೂರದ ಕೊಪ್ಪಳ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್ ಗೆ ಹೋಗಿ ಕ್ಯೂ ನಿಂತು ಶುಲ್ಕ ಪಾವತಿಸಬೇಕಿದೆ. ಆದರೆ ಖಾಸಗಿ ಪದವಿ ಮಹಾವಿದ್ಯಾಲಯದವರು ಕಾಲೇಜಿಗೆ ಬ್ಯಾಂಕ್ ನವರನ್ನು ಕರೆಸಿ ಶುಲ್ಕ ಪಾವತಿಸುವ ವ್ಯವಸ್ಥೆ ಮಾಡುತ್ತಾರೆ. ಕೊಲ್ಲಿ ನಾಗೇಶರಾವ್ ಸರಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರು ಆಸಕ್ತಿ ವಹಿಸಿ ಬ್ಯಾಂಕಿನವರನ್ನು ಕಾಲೇಜಿಗೆ ಆಹ್ವಾನಿಸದೇ ಇರುವುದರಿಂದ ವಿದ್ಯಾರ್ಥಿಗಳು, ಪಾಲಕರು ಪರದಾಡುವಂತಾಗಿದೆ.
ಮೂಲಸೌಕರ್ಯಗಳ ಕೊರತೆ: ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಸುಮಾರು 3000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರು, ಮಹಿಳಾ ಶೌಚಾಲಯ, ವಾಹನಗಳ ಪಾರ್ಕಿಂಗ್, ಕ್ಯಾಂಟೀನ್ ವ್ಯವಸ್ಥೆ , ವೈಜ್ಞಾನಿಕ ಗ್ರಂಥಾಲಯ,ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಹಲವು ಕೊರತೆಗಳು ಇಲ್ಲಿ ಎದ್ದು ಕಾಣುತ್ತಿವೆ.

ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಸರಕಾರದ ಯೋಜನೆಯ ಅನ್ವಯ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಸರ್ಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಸೂಕ್ತ ಮೂಲಸೌಕರ್ಯ ಕೊರತೆ,ಗ್ರಂಥಾಲಯ,ಆನ್ ಲೈನ್, ಆಫ್ ಲೈನ್ ಗೊಂದಲದಿಂದ ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಪದವಿ ಪ್ರವೇಶವಾಗುತ್ತಿವೆ.
ಕೊಲ್ಲಿ ನಾಗೇಶರಾವ್ ಸರಕಾರಿ ಮಹಾವಿದ್ಯಾಲಯ ಮೂಲಗ್ರಹಪೀಡಿತವಾಗಿದ್ದು ಪ್ರಭಾರಿ ಪ್ರಾಚಾರ್ಯರು ಆಸಕ್ತಿ ವಹಿಸಿ ಪದವಿ ಪ್ರವೇಶಕ್ಕೆ ಯೋಜನೆ ರೂಪಿಸಬೇಕಿದೆ. ಇಲ್ಲಿ ಮೂಲಸೌಕರ್ಯಗಳಿಲ್ಲ ಜೊತೆಗೆ ಆಡಳಿತದ ಬಿಗುವಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳು ನಿರಾಶಕ್ತಿ ತೋರಿಸಿದ್ದಾರೆ. ಕೂಡಲೇ ಸರ್ಕಾರ ಪೂರ್ಣಾವಧಿ ಪ್ರಾಚಾರ್ಯರ ನೇಮಿಸಬೇಕು. ಶಾಸಕರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಕೂಡಲೇ ಕಾಲೇಜು ಅಭಿವೃದ್ಧಿ ಸಮಿತಿಯನ್ನು ರಚಿಸಿ ಮೇಲುಸ್ತುವಾರಿ ಮಾಡಬೇಕಿದೆ.

-ಅಮರೇಶ ಕಡಗದ್ ರಾಜ್ಯಾಧ್ಯಕ್ಷ ಎಸ್ ಎಫ್ ಐ ಗಂಗಾವತಿ.


ಯುಜಿಸಿ ಅನುದಾನ ಸೇರಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಕಾಲೇಜಿಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ನೀಡಿದ್ದರೂ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಕಾಲೇಜಿನ ಪ್ರಾಚಾರ್ಯರು ವಿಫಲರಾಗಿದ್ದಾರೆ.
ಹಲವು ವರ್ಷಗಳಿಂದ ಮೂಲಗ್ರಹ ಪೀಡಿತವಾಗಿರುವ ಈ ಕಾಲೇಜಿನ ವ್ಯವಸ್ಥೆಗೆ ಮೂಲ ಕಾಯಕಲ್ಪ ಕಲ್ಪಿಸಲು ಸರ್ಕಾರ ಇದುವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ. ಮೂಲಸೌಕರ್ಯ ಸೇರಿ ಕಾಲೇಜಿನ ಶೈಕ್ಷಣಿಕ ಪೂರಕ ವ್ಯವಸ್ಥೆ ಕಲ್ಪಿಸಲು ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಕಮಿಟಿ ರಚನೆಯಾಗಿ ಸಮಾಜದ ವಿವಿಧಗಣ್ಯರು ಈ ಕಮಿಟಿಯಲ್ಲಿದ್ದು ಅನೇಕ ಸೌಕರ್ಯಗಳನ್ನು ಕುರಿತು ಸಲಹೆ ಸೂಚನೆ ಪಡೆಯಲು ಸಾಧ್ಯವಾಗುತ್ತದೆ .
ಆದರೆ ಇದುವರೆಗೂ ಕಾಲೇಜು ಅಭಿವೃದ್ಧಿ ಕಮಿಟಿ ರಚನೆ ಆಗದೆ ಇರುವುದು ಸಹ ಈ ಕಾಲೇಜಿನ ಶೈಕ್ಷಣಿಕ ವಾತಾವರಣ ಕೆಡಲು ಪ್ರಮುಖ ಕಾರಣ ಎನ್ನಲಾಗುತ್ತದೆ.

ಬಾಕ್ಸ್

About Mallikarjun

Check Also

ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ದ ಜುಲೈ 01 ರಂದು ಡಿ.ಎಸ್ ಎಸ್ಪ್ರತಿಭಟನೆ

ತಿಪಟೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳು ಮಹಿಳೆಯರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜುಲೈ 01ರಂದು ಸೋಮವಾರ ಕರ್ನಾಟಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.