
ಕೃಷಿ ಒಳಗೊಂಡಂತೆ ಡ್ರೋನ್ ತಂತ್ರಜ್ಞಾನಲ್ಲಿ ಕ್ರಾಂತಿಕಾರಕ ಬದಲಾವಣೆ
ಬೆಂಗಳೂರು, ಜೂ, 21; ದೇಶದ ಪ್ರಮುಖ ನರ್ಸಿಂಗ್, ಪ್ಯಾರಾ ಮೆಡಿಕಲ್, ಮ್ಯಾನೇಜ್ ಮೆಂಟ್ ಸ್ಟಡೀಸ್ ಒಳಗೊಂಡಂತೆ ಸಮಗ್ರ ಶೈಕ್ಷಣಿಕ ವಲಯದ ಧನ್ವಂತರಿ ಸಂಸ್ಥೆಯಿಂದ ನಗರದ ಚಿಕ್ಕಬಾಣಾವರದಲ್ಲಿ ಇದೇ ಮೊದಲ ಬಾರಿಗೆ “ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ” ತಲೆ ಎತ್ತಲಿದೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಜೂ. 22 [ಶನಿವಾರ] ಅಕಾಡೆಮಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದು, ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಮೂಲಕ ಕ್ರಾಂತಿಕಾರ ಬದಲಾವಣೆಗೆ ಇದು ಮುನ್ನುಡಿ ಬರೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಧನ್ವಂತರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಶೈಕ್ಷಣಿಕ ನಿರ್ದೇಶಕ ಡಾ. ಗಣೇಶ್ ಪಿ.ಬಿ, ವಿಂಗ್ ಕಮಾಂಡರ್ ಕೆ.ಆರ್. ಶ್ರೀಕಾಂತ್, ಫ್ಲೈಟ್ ಲೆಪ್ಟಿನೆಂಟ್ ಎ.ಟಿ. ಕಿಶೋರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯ – ಡಿಜಿಸಿಎ ದಿಂದ “ಧನ್ವಂತರಿ ಡ್ರೋನ್ ಪೈಲೆಟ್ ಅಕಾಡೆಮಿ” ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಅಣ್ಣಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ ಎಂದರು.
ತಮಿಳುನಾಡಿನ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪಾಧ್ಯಕ್ಷ ಡಾ. ಮೈಲಸ್ವಾಮಿ ಅಣ್ಣಾ ದೊರೈ, ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ವೆಲ್ರಾಜ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿ. ಸುರೇಶ, ಭಾರತೀಯ ವಿಜ್ಞಾನ ಮಂದಿರದ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎನ್.ಎಸ್. ಓಂಕಾರ್, ಕೇಂದ್ರದ ವಿಮಾನಯಾನ ಮಹಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಾನೆ ಮತ್ತಿತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ಧಾರೆ ಎಂದರು.
ಧನ್ವಂತರಿ ಸಂಸ್ಥೆ ಇದೇ ಮೊದಲ ಬಾರಿಗೆ ಮಾನವ ರಹಿತ ವೈಮಾನಿಕ ವಾಹನಗಳು, ಡ್ರೋನ್ ಗಳ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ಸಿ.ಎ.ಎಸ್.ಆರ್ ಹಾಗೂ ಎಂಐಟಿ, ಅಣ್ಣಾ ವಿಶ್ವವಿದ್ಯಾಲಯಗಳು ಹಾರಾಟ [ಪ್ಲೈಯಿಂಗ್] ತರಗತಿಗಳನ್ನು ನಡೆಸಲು ಅನುಮತಿ ಪಡೆದುಕೊಂಡಿವೆ. ಚಿಕ್ಕಬಾಣಾವರದಲ್ಲಿ ಕ್ಯಾಂಪಸ್ ಸಿಮ್ಯುಲೇಟರ್ ಗಳನ್ನು ಆಯೋಜಿಸಲಾಗುತ್ತದೆ ಮತ್ತು ತರಗತಿಗಳನ್ನು ನಡೆಸಲಾಗುತ್ತದೆ. ಯುಎವಿ ಸಂಗ್ರಹಣೆ, ಬ್ಯಾಟರಿ ಚಾರ್ಜಿಂಗ್, ಯುಎವಿ ನಿರ್ವಹಣೆ ಜೊತೆಗೆ ಸಮೀಪದ ಆಲೂರು ವಲಯದಲ್ಲಿ ಪ್ಲೈಯಿಂಗ್ ಫೀಲ್ಡ್ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.