
ಕೊಪ್ಪಳ : ಮಹಿಳೆಯರಿಗೆ ತಾಳಿ, ಕುಂಕುಮ, ಅರಿಶಿನ,ಕಾಲುಂಗುರ, ಹಸಿರು ಬಳೆಗಳು ಇವು ಮುತೈದೆತನದ ಸಂಕೇತವಾಗಿದ್ದು, ಇದರಿಂದ ಆ ಮನೆಯಲ್ಲಿ ಶಾಂತಿ ನೆಲೆಸಿ, ಸದಾ ಲಕ್ಷ್ಮೀ ವಾಸಿಸುವುದರಿಂದ ಗಂಡನ ಮನೆಗೆ ಕಾಲಿರಿಸಿದ ಪ್ರತಿಯೊಬ್ಬ ಮಹಿಳೆ ತನ್ನ ತವರಿನ ಹೆಸರನ್ನು ಬೆಳಗುವ ಮಹಿಳೆಯರಾಗಬೇಕು ಎಂದು ಮೈನಳ್ಳಿ ಸಿದ್ದೇಶ್ವರ ಶ್ರೀ ಗಳು ತಮ್ಮ ಆಶಿರ್ವಚನದಲ್ಲಿ ನುಡಿದರು.
ಅವರು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರ ಗ್ರಾಮದ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಮಹಿಳೆಯರು ಅತ್ತೆ, ಮಾವ ಹಾಗೂ ಕುಟುಂಬದೊಂದಿಗೆ ಗೌರವ ಭಾವನೆಗಳಿಂದ ಜೀವನ ಸಾಗಿಸುವುದರ ಜೊತೆಗೆ
ದಂಪತಿಗಳು ಸಹನೆ, ತಾಳ್ಮೆ ಹಾಗೂ ತ್ಯಾಗ ಮನೋಭಾವನೆ ಹೊಂದಿ ಜೀವನ ಸಾಗಿಸಬೇಕು ಎಂದು ನವ ದಂಪತಿಗಳಿಗೆ ಗುಳೆದಗುಡ್ಡದ ಓಪ್ಪತ್ತೇಶ್ವರ ಮಹಾಸ್ವಾಮಿಗಳು ತಮ್ಮ ಆಶಿರ್ವಚನದಲ್ಲಿ ಕಿವಿ ಮಾತನ್ನು ಹೇಳಿದರು.
ದಿ.19ರಿಂದ ಐದು ದಿನಗಳ ಕಾಲ ಪ್ರವಚನ ಕಾರ್ಯಕ್ರಮ ಹಾಗೂ 10ನೇ ತರಗತಿಯಲ್ಲಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ದಿ.22ರಂದು ಅಳವಂಡಿ ಸಿದ್ದೇಶ್ವರ ಮಠದ ಮರಳಾರಾಧ್ಯ ಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಜರುಗಿದವು.
ವಿವಾಹ ಕಾರ್ಯಕ್ರಮಕ್ಕೆ ಲಕಮಾಪುರ ಬಸವರಾಜ ಸ್ವಾಮಿ ಮುಗಂಡಮಠ ವಸ್ತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯವರಾದ ಮಹಾಂತೇಶ ಸಿಂದೋಗಿಮಠ, ತಿಮ್ಮಣ್ಣ ಸಿದ್ನೇಕೊಪ್ಪ, ಸಿದ್ದಪ್ಪ ಗಿಣಗೇರಿ, ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವ ಬಿಸ್ನಳ್ಳಿ, ಒನಕೇರಪ್ಪ ಮುಕ್ಕಣ್ಣವರ್, ಲಕ್ಷ್ಮಣ ದೊಡ್ಮನಿ, ವೆಂಕಣ್ಣ ಹಳ್ಳಿ, ಈರಪ್ಪ ವಾಸ್ತೆನವರು ಹಾಗೂ ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳು, ಸುತ್ತಮುತ್ತಲಿನ ಗ್ರಾಮದವರು ಭಾಗಿಯಾಗಿದ್ದರು.