
ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ ಉಳಿಯುವವರ ಪೌರತ್ವ ನಿಷೇಧ ಮಾಡಬೇಕು ಎಂದು ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವಾ ಚುನಾವಣೆ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಂಗಮೇಶ ಅವರು, ಭಾರತದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗಳಲ್ಲಿ ಮತದಾರರ ಪಾತ್ರ ಮಹತ್ವದ್ದು. ಸಂವಿಧಾನದಡಿ ನಮಗೆ ದೊರೆತಿರುವ ಮಹತ್ತರವಾದ ಹಕ್ಕನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಚಲಾಯಿಸುವ ಮೂಲಕ ಸುಭದ್ರ ಸರಕಾರದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತ ಜಾಗೃತಿಗಾಗಿ ಚುನಾವಣೆ ಆಯೋಗ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಾಲದೆಂಬಂತೆ ಮತದಾನದ ದಿನ ರಜೆಯನ್ನೂ ಘೋಷಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮತದಾನ ಮಾಡದೆ ಹೊರ ಉಳಿದಿರುವವರ ಸಂಖ್ಯೆ ಹೆಚ್ಚುತ್ತಿದೆ. ಆತಂಕದ ವಿಷಯವೆಂದರೆ ಮತದಾನ ಮಾಡದವರಲ್ಲಿ ಪ್ರತಿಶತ 40 ರಷ್ಟು ವಿದ್ಯಾವಂತರೆ ಹೆಚ್ಚಿದ್ದಾರೆ. ಮತದಾನ ದಿನದ ರಜೆಯನ್ನು ಮಜಾ ದಿನವನ್ನಾಗಿಸಿಕೊಂಡು, ಮತದಾನ ಮಾಡದೇ ಮೋಜುಮಸ್ತಿಯಲ್ಲಿ ಕಳೆಯುವವರಿಗೆ ಬುದ್ದಿ ಕಲಿಸಲು ಅಂಥವರನ್ನು ಗುರುತಿಸಿ ಪೌರತ್ವವನ್ನು ನಿಷೇಧ ಮಾಡಬೇಕು. ಇಂಥಹದ್ದೊಂದು ಕಾನೂನು ಜಾರಿಯಾದಾಗ ಮಾತ್ರ ನೂರಕ್ಕೆ ನೂರರಷ್ಟು ಮತದಾನ ಆಗಲು ಸಾಧ್ಯ.
ಮುಂಬರುವ ದಿನಗಳಲ್ಲಿ ಮತದಾನ ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಕೆಲಸವನ್ನು ಸರಕಾರಗಳು ಪಕ್ಷಬೇಧ ಮರೆತು ಮಾಡಬೇಕಿದೆ. ಹಾಗಾದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಲು ಸಾಧ್ಯ ಎಂದು ಸುಗ್ರೀವಾ ತಿಳಿಸಿದ್ದಾರೆ.