ಮೇ 7 ರಂದು ಕಡ್ಡಾಯವಾಗಿ ಮತ ಚಲಾಯಿಸಿ ಸಹಾಯಕ ಚುನಾವಣಾ ಅಧಿಕಾರಿಗಳಾದ ಮಹೇಶ ಮಾಲಗತ್ತಿ ಹೇಳಿಕೆ
ಗಂಗಾವತಿ : ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿಗಾಗಿ ಶುಕ್ರವಾರ ಸಂಜೆ ಆಯೋಜಿಸಿದ್ದ ವಿಶೇಷಚೇತನರ ಬೈಕ್ ರ್ಯಾಲಿ ಹಾಗೂ ಸಹಕಾರಿ ಸಂಘಗಳ ಸಿಬ್ಬಂದಿಗಳ ಬೈಕ್ ರ್ಯಾಲಿಗೆ ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಉಪ ವಿಭಾಗಧಿಕಾರಿಗಳಾದ ಮಹೇಶ ಮಾಲಗತ್ತಿ ಹಾಗೂ ಜಿಲ್ಲಾ ಚುನಾವಣೆ ರಾಯಭಾರಿಗಳಾದ ಡಾ.ಶಿವಕುಮಾರ ಮಾಲಿಪಾಟೀಲ್
ಅವರು ಚಾಲನೆ ನೀಡಿದರು.
ಉಪ ವಿಭಾಗಧಿಕಾರಿಗಳಾದ ಮಹೇಶ ಮಾಲಗತ್ತಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು. ವಿಶೇಷಚೇತನರು ಹಾಗೂ ಸಹಕಾರಿ ಸಂಘದವರು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಎಲ್ಲ ವಿಶೇಷಚೇತನರು ಮತ ಚಲಾಯಿಸಬೇಕು ಎಂದರು.
ನಗರ ಪ್ರದೇಶದ ಜನರು ಮೇ 7 ರಂದು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ.ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿ, ಎಲ್ಲರೂ ದೇಶ ಸೇವೆ ಮಾಡಲು ಅವಕಾಶ ದೊರೆತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಶೇ.100 ರಷ್ಟು ಮತದಾನ ಆಗಬೇಕು ಎಂದರು.
ಮೇ 7 ರಂದು ನಡೆಯುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು ಎಂದರು.
ತಾಲೂಕು ಪಂಚಾಯತ್ ಆವರಣದಿಂದ ಆರಂಭಗೊಂಡ ಬೈಕ್ ರ್ಯಾಲಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚರಿಸಿ, ಬಸ್ ನಿಲ್ದಾಣದ ಕೃಷ್ಣದೇವರಾಯ ವೃತ್ತದ ಬಳಿ ಸಮಾರೋಪ ಗೊಂಡಿತು. ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ.ಶಿವಕುಮಾರ ಮಾಲಿಪಾಟೀಲ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತರಾದ ವಿರೂಪಾಕ್ಷಮೂರ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ್, ನಗರಸಭೆ ಆರೋಗ್ಯ ನಿರೀಕ್ಷಕರಾದ ನಾಗರಾಜ, ತಾ.ಪಂ. ಎಂ ಆರ್ ಡಬ್ಲ್ಯು ಮಂಜುಳಾ ಪುರಾಣಿಕಮಠ್, ಎಸ್ ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರಾದ ಆಂಜನೇಯ, ವಿವಿಧ ಸಹಕಾರಿ ಸಂಘಗಳ ಪ್ರಮುಖರಾದ ಶಾಂತಮೂರ್ತಿ, ಕಲ್ಯಾಣ ಬಸವ, ಷಣ್ಮುಖಪ್ಪ, ಸತೀಶ, ಶಾಂತಯ್ಯ, ಮೌನೇಶ. ಸುಧಾಕರ ಸೇರಿ ಇತರರು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು ಇದ್ದರು.