Let’s create a new chapter for Bagalkot: Samyukta Patil
ಸಾವಳಗಿ: ಇಂದಿರಾ ಗಾಂಧಿ ಕಾಲದಿಂದಲೂ ಬಡವರ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ತನ್ನದೆಯಾದ ಇತಿಹಾಸ ಹೊಂದಿದೆ. ಇಂತಹ ಪಕ್ಷದಲ್ಲಿ ನಾವು ಕಾರ್ಯಕರ್ತರಾಗಿರುವುದು ಹೆಮ್ಮೆಯ ಸಂಗತಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ ಪಾಲಿಗೆ ಆಶಾಕಿರಣವಾಗಿದೆ. ಆದ್ದರಿಂದ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿನ ಸರಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ ಹೇಳಿದರು.
ನಗರದ ಮಾಳಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬಾಗಲಕೋಟೆ ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಎಲ್ಲ ವರ್ಗದ ಜನರಿಗೆ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಿದೆ, ‘ದೇಶದಲ್ಲಿ ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಇಡೀ ಪ್ರಪಂಚವೇ ಹೇಳುತ್ತಿದೆ. ಗದ್ದಿಗೌಡರು ಮೊದಲು ಮೋದಿ ಅಲೆ ಇಂದ ಬಂದರು, ಎರಡನೇ ಬಾರಿಯೂ ಯಡಿಯೂರಪ್ಪ ಅವರ ಗಾಳಿ ಮೇಲೆ ಬಂದರು, ಅವರು ಲಕ್ಕ ಬಾರಿ ಇದೆ ಎನ್ನುವವರಿಗೆ ನನ್ನದು ಲಕ್ಕ ಬಾರಿ ಇದೆ ನಾನು ಗಜಕೇಸರಿ ಯೋಗದಲ್ಲಿ ಜನ್ಮ ಪಡೆದಿದ್ದೇನೆ ನಾನು ಈ ಬಾರಿ ಬಾಗಲಕೋಟೆಗೆ ಸಂಸದೆ ಆಗುತ್ತೇನೆ, ಯಾರು ಪರಿಶ್ರಮ ಪಡುತ್ತಾರೋ ಅವರು ಯಶಸ್ಸು ಕಾಣುವವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ ನಮ್ಮ ತಂದೆ ಅವರು ಕೇಂದ್ರ ಸಚಿವರು ಇದ್ದಾಗ ಪ್ರಾರಂಭ ಮಾಡಿದ ಕುಡಚಿ- ಬಾಗಲಕೋಟೆ ರೈಲು ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಗದ್ದಿಗೌಡರು ನಮ್ಮ ಜಿಲ್ಲೆಗೆ ಅಭಿವೃದ್ಧಿಯ ಬಗ್ಗೆ ಎಂದು ಒಂದು ದಿನ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ, ಹಾಗಾಗಿ ನಮ್ಮ ಸಹೋದರಿ ಸಂಯುಕ್ತ ಪಾಟೀಲ ಅವರನ್ನು ಈ ಬಾರಿ ಬಾಗಲಕೋಟೆಯಿಂದ ಸಂಸದೆಯಾಗಿ ಆಯ್ಕೆ ಮಾಡಿದೆ ಆದಲ್ಲಿ ಮುಂದಿನ ದಿನಗಳಲ್ಲಿ ಬಾಗಲಕೋಟೆ ಕುಡಚಿ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಸಾಮರ್ಥ್ಯವನ್ನು ಸಂಯುಕ್ತ ಅವರು ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೂ ಉಪಯೋಗವಾಗಿದೆ, ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ರೆ ಅದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಜೀರ್ ಕಲೋಳ್ಳಿ, ವರ್ಧಮಾನ ನ್ಯಾಮಗೌಡ, ರಾಜು ಮೇಲಿನಕೇರಿ, ಬಿ.ಎಸ್. ಸಿಂಧೂರ, ಸಿದ್ದು ಮೀಶಿ, ಅಭಯಕುಮಾರ ನಾಂದ್ರೇಕರ, ಗಜಾನನ ಮಾಳಿ, ಅರ್ಜುನ್ ದಳವಾಯಿ, ಶ್ರೀಶೈಲ ದಳವಾಯಿ ಸೇರಿದಂತೆ ಅನೇಕ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.