Kannada academies are dominated by meritorious students of the district Commendable Minister: Dhanraj e.
ಗಂಗಾವತಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿ, ಪ್ರಾಧಿಕಾರಗಳಿಗೆ ಈ ಬಾರಿ ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಅರ್ಹರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ೩೭೧(ಜೆ) ಅನುಷ್ಠಾನ ಸಮಿತಿ ಸಂಚಾಲಕರೂ, ಜಿಲ್ಲಾ ಪ್ರವರ್ಗ-೧ ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಧನರಾಜ ಈ. ರವರು ತಿಳಿಸಿದ್ದಾರೆ.
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾದ ಡಾ. ಶರಣಬಸಪ್ಪ ಕೋಲ್ಕಾರ್, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಅಜಮೀರ ನಂದಾಪುರ, ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ರಮೇಶ ಗಬ್ಬೂರುರವರನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು.
ಸರ್ಕಾರದ ಪ್ರಶಸ್ತಿಗಳು ಹಾಗೂ ನೇಮಕಾತಿಗಳು ಎಂದರೆ ಸಾಧನೆಗಿಂತ ಪ್ರಭಾವ ಮತ್ತು ಸ್ವ-ಸಾಧನಾ ಪತ್ರವಿಡಿದು ಅಂಗಲಾಚುವವರಿಗೆ ಮಾತ್ರ ಎನ್ನುವ ಈ ಕಾಲಘಟ್ಟದಲ್ಲಿ ಈ ಮೂವರು ಸೇರಿದಂತೆ ವಿರುಪಣ್ಣ ಕಲ್ಲೂರು, ಡಾ. ದೇವೆಂದ್ರಪ್ಪ ಜೆ ಮತ್ತಿತರರ ಜಿಲ್ಲೆಯ ನೈಜ ಸಾಧಕರಿಗೆ ಅದೂ ಸಾಮಾಜಿಕ ನ್ಯಾಯದಡಿಯಲ್ಲಿ ಮನ್ನಣೆ ನೀಡಿದ್ದು ನಿಜಕ್ಕೂ ಶ್ಲಾಘನೀಯ. ರಾಜಕಾರಣವೇನೆ ಇರಲಿ ಅಧಿಕಾರ ದೊರೆತಾಗ ತಮ್ಮ ಜಿಲ್ಲೆ, ಪಕ್ಷ, ಕ್ಷೇತ್ರದ ಅರ್ಹ, ಅದರಲ್ಲೂ ಧ್ವನಿ ಇಲ್ಲದವರಿಗೆ ಸ್ಥಾನಮಾನ ಕಲ್ಪಿಸಬೇಕಿರುವುದು ನಿಜವಾದ ನಾಯಕನ ಕರ್ತವ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶಿವರಾಜ ತಂಗಡಗಿಯವರನ್ನು ಇಡೀ ಜಿಲ್ಲೆಯ ಜನತೆ ಪರವಾಗಿ ಅಭಿನಂದಿಸುತ್ತೇನೆ. ದೀರ್ಘಕಾಲ ಎಲೆಮೆರೆ ಕಾಯಿಯಂತೆ ಕನ್ನಡ ಭಾಷೆ, ಸಂಶೋಧನೆ, ನಾಟಕ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.