Free Infertility Counseling Camp under the auspices of Rotary Club Badagi
ರೋಟರಿ ಕ್ಲಬ್ ಬ್ಯಾಡಗಿ ಆಶ್ರಯದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ ಮತ್ತು ಕಡ್ಲಿ ನಿಂಗಮ್ಮ ಮೆಮೋರಿಯಲ್ ಹಾಸ್ಪಿಟಲ್ ಅವರ ಕಡ್ಲಿ IVF ಸೆಂಟರ್ ದಾವಣಗೆರೆ ಇವರ ಸಹೋಗದೊಂದಿಗೆ ಮಹಿಳಾ ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಕಟ್ಟಡ ಬ್ಯಾಡಗಿಯಲ್ಲಿ ಪ್ರಥಮ ಬಂಜೆತನ ನಿವಾರಣೆ ಉಚಿತ ಸಮಾಲೋಚನೆ, ಸಂದರ್ಶನ ಮತ್ತು ತಪಾಸಣೆ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಕಡ್ಲಿ IVF ಸೆಂಟರ್ ದಾವಣಗೆರೆಯ ಪ್ರಸಿದ್ಧ ತಜ್ಞ ವೈದ್ಯರಾದ ಡಾ. ವರದಾ ಕಿರಣ್ (IVF ಸ್ಪೆಷಲಿಸ್ಟ್ ತಜ್ಞರು, KIEL ಜರ್ಮನಿ) ಅವರಿಂದ ಬಂಜೆತನ ನಿವಾರಣೆ ಹಾಗೂ IVF ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ಸಮಾಲೋಚನೆ, ಸಂದರ್ಶನ ಉಚಿತವಾಗಿ ದೊರೆಯಿತು. ಬ್ಯಾಡಗಿಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಾಗದ, ಮಕ್ಕಳ ಬಯಸುವ ಸುಮಾರು 28 ದಂಪತಿಗಳು ಬಂದು ಈ ಉಚಿತ ಶಿಬಿರದ ಪ್ರಯೋಜನ ಪಡೆದರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಬ್ಯಾಡಗಿಯ ಮಾಜೀ ಅಧ್ಯಕ್ಷ ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಇವರು ಸ್ವಾಗತಿಸಿ ಮಾತನಾಡಿ ಸಾರ್ವಜನಿಕರು ಹೆಸರಾಂತ ಆಸ್ಪತ್ರೆಗಳಿಗೆ ಬೇರೆ ಬೇರೆ ಊರಿಗೆ ತೆರಳಿ ಸಾವಿರಾರು ಹಣ ಖರ್ಚು ಮಾಡಿ ತಮ್ಮ ಸಮಯವನ್ನು ಸಹ ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಇಂತಹ ಸಂದರ್ಭಗಳಲ್ಲಿ ನಮ್ಮ ರೋಟರಿ ಸಂಸ್ಥೆ ವತಿಯಿಂದ ಅನೇಕ ಆರೋಗ್ಯ ಸಂಬಂಧಿ ಹಾಗೂ ಶೈಕ್ಷಣಿಕ ಸಂಬಂಧಿ ಶಿಬಿರಗಳನ್ನು ನಡೆಸುತ್ತಿದ್ದು ಇದರಿಂದ ಪಟ್ಟಣದ ಸಾರ್ವಜನಿಕರಿಗೆ ಸಮಯ ಮತ್ತು ಆರ್ಥಿಕವಾಗಿ ಬಹಳ ಉಳಿತಾಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಇಂತಹ ಶಿಬಿರಗಳು ದೊಡ್ಡ ಪಟ್ಟಣಗಳ ದೊಡ್ಡ ಆಸ್ಪತ್ರೆಗಳ ವೈದ್ಯರ ಸಲಹೆಗಳು ಸೌಲಭ್ಯಗಳು ಉಚಿತವಾಗಿ ಸ್ವಂತ ಸ್ಥಳದಲ್ಲಿಯೇ ಲಭಿಸುತ್ತಿದ್ದು ಇದು ಉತ್ತಮ ಅವಕಾಶ ಹಾಗೂ ಪ್ರಯೋಜನಕಾರಿ. ಇನ್ನೂ ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಮ್ಮ ಸಂಸ್ಥೆಯಿಂದ ನಡೆಯಲಿದ್ದು ಸಾರ್ವಜನಿಕರು ಹೆಚ್ಚು ಹೆಚ್ಚಾಗಿ ಬಂದು ಇಂತಹ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಉದ್ಘಾಟನೆ ಮಾಡಿದ ಡಾಕ್ಟರ್ ವರದಾ ಕಡ್ಲಿ ಅವರು ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಈ ಬಂಜೆತನವು 10 ಮಹಿಳೆಯರಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಕಾಡುತ್ತಲಿದ್ದು ಇದರ ಬಗ್ಗೆ ಮಹಿಳೆಯರಿಗೆ ಇನ್ನೂ ಹೆಚ್ಚು ಜ್ಞಾನ ಇರದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. IVF ಚಿಕಿತ್ಸೆ ಬಂದು ಸುಮಾರು 40 ವರ್ಷ ಕಳೆದರೂ ಅಜ್ಞಾನ ಹಾಗೂ ಮಾಹಿತಿಯ ಕೊರತೆಯಿಂದ ಚಿಕ್ಕ ಪ್ರದೇಶಗಳ ಜನರು ಇನ್ನೂ ಈ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇಂತಹ ತೊಂದರೆ ಇರುವ ಮಹಿಳೆಯರು ಆದಷ್ಟು ಬೇಗನೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ಹೆಚ್ಚು ಸಮಯ ಕಳೆಯಬಾರದು ಹಾಗೂ ಇದನ್ನು ಮುಚ್ಚಿಕೊಳ್ಳುವಂತಹ ಸಂಗತಿ ಏನು ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂದಿನ ಊಟಉಪಚಾರ, ಜೀವನ ಶೈಲಿ, ಕೆಲಸದ ವಾತಾವರಣ, ವ್ಯಸನಗಳು ಹೀಗೆಯೇ ಅನೇಕ ಕಾರಣಗಳಿಂದ ಬಂಜೆತನ ತೊಂದರೆ ಕಾಡುತ್ತಿದೆ. ಆಧುನಿಕವಾಗಿ ಹಲವು ಚಿಕಿತ್ಸೆಗಳು ಲಭ್ಯವಿದ್ದು ನಾನು ಕೇರಳ ಹಾಗೂ ಜರ್ಮನಿಯಲ್ಲಿ ವಿಶೇಷ ತರಬೇತಿ ಪಡೆದಿದ್ದೇನೆ ಆಸಕ್ತರು ನಮ್ಮ ದಾವಣಗೆರೆಯ ಕಡ್ಲಿ IVF ಸೆಂಟರ್ ಗೆ ಬೇಟಿ ಕೊಟ್ಟು ಹೆಚ್ಚಿನ ತಪಾಸಣೆಗೆ ಬರಬಹುದು. ರೋಟರಿ ಸಂಸ್ಥೆಯ ಶಿಬಿರದಲ್ಲಿ ಬಂದಿದ್ದು ತಿಳಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಭಾರಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಅಸಿಸ್ಟಂಟ್ ಗವರ್ನರ್ ಶ್ರೀ ಮಾಲತೇಶ ಅರಳಿಮಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ, ಮಾಲತೇಶ ಅರಳಿಮಟ್ಟಿ, ಸತೀಶ ಅಗಡಿ, ಪರುಶುರಾಮ ಮೇಲಗಿರಿ, ಪವಾಡಪ್ಪ ಆಚನೂರ, ವಿಶ್ವನಾಥ ಅಂಕಲಕೋಟಿ, ಹಾಗೂ ಇನ್ನರ್ವಿಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮಹೇಶ್ವರಿ ಪಸಾರದ, ಲಕ್ಷ್ಮೀ ಉಪ್ಪಾರ, ಪ್ರತಿಭಾ ಮೇಲಗಿರಿ, ರೂಪಾ ಕಡೇಕೊಪ್ಪ, ಕವಿತಾ ಸೊಪ್ಪಿನಮಠ, ಶೋಭಾ ನೋಟದ, ಸುಶೀಲಾ ಕಲಶೆಟ್ಟಿ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಶಂಕರ ಮತ್ತು ಆಪ್ತ ಸಮಾಲೋಚಕಿ ಗಾಯತ್ರಿ ಅರ್ಕಚಾರಿ ಹಾಗೂ ಕಡ್ಲಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಉಪಸ್ಥಿತರಿದ್ದರು