“Mahasivaratri Vigil of Laughter of Wise Men” at Siruru Park

ಬೆಂಗಳೂರು; ಮಹಾಶಿವರಾತ್ರಿ ಅಂಗವಾಗಿ ನಗರದ ಸಿರೂರು ಪಾರ್ಕ್ ನಲ್ಲಿ ಶುಕ್ರವಾರ ಮಾ. 8 ರ ರಾತ್ರಿ “ಜಾಣ ಜಾಣೆಯರ ನಗೆ ಜಾಗರಣೆಯ ಬೆಳ್ಳಿಹಬ್ಬ” ಆಯೋಜಿಸಲಾಗಿದೆ.
ಶೇಷಾದ್ರಿಪುರದ ಸಿರೂರು ಪಾರ್ಕ್ ನಲ್ಲಿ (ಮಂತ್ರಿ ಮಾಲ್ ಎದುರು) ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಹೋರಾತ್ರಿ ಮನರಂಜನೆ ನೀಡಲಿದೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗೆ ಹೊನಲು ಹರಿಸಲು ಹಾಸ್ಯ ಕಲಾವಿದರು ಸಜ್ಜಾಗಿದ್ದಾರೆ.
ಉಡುಪಿಯ ‘ಶ್ರೀ ದುರ್ಗಾ ಮಹಿಳಾ ಚಂಡೆ’ ಬಳಗದರಿಂದ ವಿಶೇಷ ಪ್ರದರ್ಶನ ಇರಲಿದ್ದು, ರಾಧಾಕೃಷ್ಣ ಉರಾಳ ಅವರ ತಂಡದಿಂದ ಯಕ್ಷಗಾನದಲ್ಲಿ ಹಾಸ್ಯ, ದೇವಿಕಾ ಮತ್ತು ತಂಡದವರಿಂದ ‘ಭರತನಾಟ್ಯ’, ಅಂತಾರಾಷ್ಟ್ರೀಯ ಪ್ರಹ್ಲಾದಾಚಾರ್ಯರಿಂದ ಜಾದೂಗಾರ ಪ್ರದರ್ಶನ. ಶಾಡೋಪ್ಲೇ, ಮಾತಾಡುವ ಗೊಂಬೆ ಕಾರ್ಯಕ್ರಮ, ಹಾಸ್ಯಮಯ ಜಾದೂ ಪ್ರದರ್ಶನ, ಶ್ರೀ ಪ್ರಹ್ಲಾದಾಚಾರ್ಯರ ಮಕ್ಕಳಿಂದ ಬಹು ಅಪರೂಪದ ‘ಗಾಂಧಾರಿ ವಿದ್ಯೆ’ ಪ್ರದರ್ಶನ ಇರಲಿದೆ ಎಂದು “ಜಾಣ ಜಾಣೆಯರ ನಗೆ ಜಾಗರಣೆಯರ ರಾಘವೇಂದ್ರ ಆಚಾರ್, ಉದಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಿಡ್‌ನೈಟ್ ಮಸಾಲಾ ಪ್ರದರ್ಶನ ಕೂಡ ಆದ್ಯತೆ ನೀಡಿದ್ದು, ಮಧ್ಯರಾತ್ರಿಯಲ್ಲಿ ಯಾವುದಾದರೂ ಒಂದು ಹೊಸಬಗೆಯ ಕಾರ್ಯಕ್ರಮ ಇರಲಿದೆ. ಈ ಸಲ ‘ಶಕುಂತಲಾ-ದುಷ್ಯಂತ’ ಅವರ ಸರಸ ಸಲ್ಲಾಪ. ‘ದಯಾನಂದ ಲೋಕ’ ಕಲಾವಿದರಿಂದ ಮಿಮಿಕ್ರಿ, ವೈವಿಧ್ಯಮಯ ಹಾಸ್ಯ, ಹಾಡು ಗಮನ ಸೆಳೆಯಲಿವೆ.
2000 ರಲ್ಲಿ “ಜಾಣ ಜಾಣೆಯರ ನಗೆ ಜಾಗರಣೆ ಆರಂಭವಾಗಿದ್ದು, ಇದೀಗ 25 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಪ್ರತಿವರ್ಷ ಹೊಸ ಹೊಸ ಉದಯೋನ್ಮುಖ ಹಾಸ್ಯ ಭಾಷಣಕಾರರನ್ನು ಪರಿಚಯಿಸುತ್ತಿದ್ದೇವೆ. ಈ ವರ್ಷವೂ ಮೊದಲ ಬಾರಿಗೆ ಕೆಲವು ಕಲಾವಿದರು ವೇದಿಕೆಯ ಮೇಲೆ ರಂಜಿಸಲಿದ್ದಾರೆ.
ಖ್ಯಾತ ಹಾಸ್ಯ ಭಾಷಣಕಾರರಾದ ಪ್ರೊ.ಎಂ.ಕೃಷ್ಣಗೌಡ, ಶ್ರೀ ಎಂ.ಎಸ್.ನರಸಿಂಹಮೂರ್ತಿ, ರವಿ ಭಜಂತ್ರಿ ಬೆಳಗಾಂ, ವೈಜನಾಥ ಸಜ್ಜನ್‌ಶೆಟ್ಟಿ ಬೀದರ್, ಚಿತ್ರನಟ ಮುಖ್ಯಮಂತ್ರಿ ಚಂದ್ರು, ಉಡುಪಿಯ ಸಂಧ್ಯಾಶೆಣೈ, ಹೊಸಪೇಟೆಯ ಡಾ.ಬೆಣ್ಣೆ ಬಸವರಾಜ್ ಮುಂತಾದವರ ಹಾಸ್ಯ – ಲಾಸ್ಯ ಆಕರ್ಷಣೀಯವಾಗಿರಲಿದೆ ಎಂದು ಹೇಳಿದ್ದಾರೆ.