Be careful in the sale of drugs that cause sleepiness and drowsiness – ASI Sivasharanappa
ಗಂಗಾವತಿ: ನಿದ್ದೆ ,ಮಂಪರು ಬರುವ ಔಷಧಗಳ ಮಾರಾಟದಲ್ಲಿ ಜಾಗ್ರತೆ ವಹಿಸಬೇಕೆಂದು ನಗರ ಠಾಣೆಯ ಎ.ಎಸ್.ಐ.ಶಿವ ಶರಣಪ್ಪ ಔಷಧ ವ್ಯಾಪಾರಿಗಳಿಗೆ ಕರೆ ನೀಡಿದರು.
ಅವರು ಔಷಧೀಯ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಗರದ ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ ಇನ್ಸುಲಿನ್ ಸಿರಂಜಿ ಮತ್ತು ಔಷಧಗಳ ಖಾಲಿ ಪೊಟ್ಟಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದು,ಇಂತಹ ಔಷಧಗಳ ಮಾರಾಟದಲ್ಲಿ ಎಚ್ಚರಿಕೆ ವಹಿಸುವ ಮೂಲಕ ಔಷಧ ವ್ಯಾಪಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕೆಂದು ಹೇಳಿದರು.
ನೋವು ನಿವಾರಕ ಔಷಧಗಳು ಸಹ ದುರ್ಭಳಕೆಗಳಾಗುತ್ತಿದ್ದು,ಈ ಬಗ್ಗೆಯೂ ಕಾಳಜಿವಹಿಸಬೇಕೆಂದು ಪಿ.ಎಸ್.ಐ.ತಿಮ್ಮಾರೆಡ್ಡಿ ಇದೇ ಸಂದರ್ಭದಲ್ಲಿ ತಿಳಿಸಿದರು.ಚಿಕ್ಕ ಮಕ್ಕಳು ಮತ್ತು ವಯಸ್ಕರು ಔಷಧ ಖರೀದಿಸಲು ಬಂದಾಗ ಕೂಲಂಕುಷವಾಗಿ ವಿಚಾರಿಸಿ,ಔಷಧಗಳನ್ನು ಮಾರಾಟ ಮಾಡಿ,ಅನುಮಾನ ಬಂದರೆ ಪೋಲೀಸ್ ಠಾಣೆಗೆ ಮಾಹಿತಿ ಕೊಡಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುವರ್ಣ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿ,ನಿರ್ದಿಷ್ಟ ಪಡಿಸಿದ ಔಷಧ ಮಾರಾಟ ಮಾಡುವಾಗ ರೋಗಿಗಳ ಮತ್ತು ವೈದ್ಯರ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್ ನಲ್ಲಿ ದಾಖಲಿಸಿಕೊಂಡು ಔಷಧಗಳನ್ನು ಮಾರಾಟ ಮಾಡಲು ಸೂಚಿಸಿದರು.
ಆನ್ ಲೈನ್ ಮೂಲಕವೂ ಔಷಧ ಖರೀದಿಸಲು ಅವಕಾಶ ಇರುವುದರಿಂದ ಔಷಧಗಳ ದುರ್ಭಳಕೆಯ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.ಅದಕ್ಕಾಗಿ ಔಷಧ ವ್ಯಾಪಾರಿಗಳು ಈ ಬಗ್ಗೆ ಮಾಹಿತಿ ದೊರೆತರೆ ಕೂಡಲೇ ಪೋಲೀಸ್ ಅಥವಾ ಸಂಘದ ಗಮನಕ್ಕೆ ತರಲು ಸದಸ್ಯರನ್ನು ಕೋರಿದರು.
ಫ಼ಾರ್ಮಾಸಿಸ್ಟ ಬಸನಗೌಡ ಸಿದ್ದಾಪೂರ,ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಅಧ್ಯಾಪಕ ಆಬೀದ್ ಹುಸೈನ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಹಿರೇಮಠ ಬೂದಗುಂಪಾ ಕಾರ್ಯವನ್ನು ನಿರೂಪಿಸಿದರು. ಪಿ.ಸಿ.ಶ್ರೀಶೈಲ ಭಾಗವಹಿಸಿದ್ದರು.
ಜಾಗ್ರತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಪೋಲೀಸ್ ಅಧಿಕಾರಿಗಳಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.
ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕರಾದ ಎಚ್.ರೇವಣ ಸಿದ್ದಪ್ಪ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.