ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಅಂಗವಾಗಿ ನಡೆಯುತ್ತಿರುವ ಅಹೋ ರಾತ್ರಿ ಹೋರಾಟವು ಅಂತ್ಯಗೊಂಡಿದೆ . ಆರೋಗ್ಯ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕೆಲವು ಭರವಸೆಗಳು ನೀಡಿದ್ದರೂ , ಪ್ರಮುಖ ಬೇಡಿಕೆಗಳು ಈಡೇರಿರಲಿಲ್ಲ . ಹಾಗಾಗಿ ಹೋರಾಟವು ಮುಂದುವರೆಯಿತು . ಹೋರಾಟದ ಒತ್ತಡದ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು , ಆಶಾ ಸಂಘದ ರಾಜ್ಯ ಅಧ್ಯಕ್ಷರು , ರಾಜ್ಯ ಕಾಯದರ್ಶಿಗಳು ಹಾಗೂ ರಾಜ್ಯ ಮುಖಂಡರ ನಿಯೋಗವನ್ನು ಕರೆದು ಇಂದು ಚರ್ಚಿಸಿದರು . ಈ ಚರ್ಚೆಯ ನಂತರ ಕೆಳಗಿನ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು .
ಸಂಘದ ನಿಯೋಗವು ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿತು . ಆಶಾಗಳ ಗಂಭೀರ ಸಮಸ್ಯೆಗಳು ಮತ್ತು ಅವರಿಗಾಗಿರುವ ಅನ್ಯಾಯಗಳು ಗಮನದಲ್ಲಿದೆಯೆಂದು ತಿಳಿಸಿದ ಮಾನ್ಯ ಮುಖ್ಯಮಂತ್ರಿಗಳು ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು . ಅದಕ್ಕೆ ಸಂಬಂಧಪಟ್ಟಂತೆ ಆಶಾಗಳ ಗಂಭೀರ ಸಮಸ್ಯೆಗಳನ್ನು ಚರ್ಚಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ , ಆರೋಗ್ಯ ಸಚಿವರು , ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಒಳಗೊಂಡ ವಿಸ್ತ್ರತ ಸಭೆಯನ್ನು ಫೆ .23 ರ ನಂತರ ಕರೆಯಲಾಗುವುದು ಎಂದು ತಿಳಿಸಿದರು .
ಮುಖ್ಯಮಂತ್ರಿಗಳ ಜೊತೆ ಮಾತುಕತೆಯ ನಂತರ , ತುರ್ತು ಸಭೆ ನಡೆಸಿದ ಆಶಾ ಸಂಘನೆಯ ಮುಖಂಡರು , ಮುಖ್ಯಮಂತ್ರಿಗಳು ವಿಸ್ತ್ರತ ಸಭೆ ಕರೆದಿರುವ ಹಿನ್ನಲೆಯಲ್ಲಿ ಹೋರಾಟವನ್ನು ಮುಂದೂಡುವ ತೀರ್ಮಾನ ಕೈಗೊಂಡರು . ಸರ್ಕಾರದ ತೆಗೆದುಕೊಳ್ಳುವ ತೀರ್ಮಾನಗಳನ್ನು ಆಧರಿಸಿ ಮುಂದಿನ ನಡೆಯನ್ನು ಸಂಘವು ನಿರ್ಧರಿಸಲಿದೆ . ಈ ತೀರ್ಮಾನವನ್ನು ಸಂಘದ ಸಭೆಯಲ್ಲಿ ಕೈಗೊಳ್ಳಲಾಯಿತು .