Breaking News

ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನದ ಲೋಗೊ ಬಿಡುಗಡೆ.

DYFI 12th State Conference Logo Release.

ಜಾಹೀರಾತು
IMG 20240122 WA0374 300x165

ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ.

ಕೊಪ್ಪಳ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧರ್ಮಾಂಧತೆ ಭಿತ್ತುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ನಗರದ ಸರ್ದಾರಗಲ್ಲಿ ಸಿಐಟಿಯು ಕಛೇರಿಯಲ್ಲಿ ಸೋಮವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿಯು ಆಯೋಜಿಸಿದ್ದ ಯುವಜನರ ವಿಸ್ತೃತ ಸಭೆಯಲ್ಲಿ ಪಾಲ್ಗೊಂಡು ಡಿವೈಎಫ್ಐ 1 2ನೇ ರಾಜ್ಯ ಸಮ್ಮೇಳನದ ಲೋಗೊ ಅನಾವರಣಗೊಳಿಸಿ ಮಾತನಾಡಿದರು.

ಉದ್ಯೋಗ ಸೃಷ್ಠಿಯ ಭರಾಟೆಯೊಂದಿಗೆ ಸರಕಾರಗಳು ಕಾರ್ಪೋರೇಟ್ ಕುಳಗಳು ಹಾಗೂ ದೇಶಿ ಹಾಗೂ ವಿದೇಶಿ ಬಂಡವಾಳಿಗರಿಗೆ ಕೈಗಾರಿಕಾ ಸ್ಥಾಪಿಸಲು ಭೂಮಿ ನೀಡುತ್ತಿವೆ. ಆದರೆ ಆ ಕಂಪೆನಿಗಳು ಕೈಗಾರಿಕೆ ಆರಂಭಿಸದೇ ಇರುವುದರಿಂದ ಉದ್ಯೋಗ ಸೃಷ್ಟಿ ಬರೀ ಭಾಷಣದಲ್ಲಿ ಉಳಿಯುತ್ತದೆ. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ಯುವಜನ ಸಂಘಟನೆಯು, ಉದ್ಯೋಗ ಸೃಷ್ಠಿಸಿ, ಸ್ಥಳೀಯರಿಗೆ ಉದ್ಯೋಗ ಒದಗಿಸಲು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು. ಉದ್ಯೋಗ ಕೊಡಲಾಗದಿದ್ದರೆ, ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 10,000 ನಿರುದ್ಯೋಗ ಭತ್ಯೆಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ದೇಶದಲ್ಲಿ ನಿರುದ್ಯೋಗ ಪ್ರಮಾಣ ವಿಪರೀತವಾಗಿ ಏರುತ್ತಿದೆ. ಉದ್ಯೋಗ ಸೃಷ್ಟಿಸಲು ವಿಫಲವಾದ ಕೇಂದ್ರ ಸರಕಾರ ಕೇವಲ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ರಾಜಕೀಯ ಲಾಭಕ್ಕೆ ಹವಣಿಸುತ್ತಿರುವುದು ಜನತೆಗೆ ಎಸಗುತ್ತಿರುವ ದ್ರೋಹವಾಗಿದೆ. ಕೇಂದ್ರ ಸರಕಾರ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಕೇಂದ್ರ ಸರ್ಕಾರದಡಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿಗೊಳಿಸಲು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದರು.

ಯುವನಿಧಿ ಗ್ಯಾರಂಟಿ ಯೋಜನೆ ಪರಿಷ್ಕರಣೆಯಾಗಲೇಬೇಕು: ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆಯಾದರೂ, ಕೇವಲ ಹಿಂದಿನ ವರ್ಷ ಉತ್ತೀರ್ಣರಾದವರಿಗೆ ಈ ಯೋಜನೆಯನ್ನು ಅನ್ವಯಿಸಿರುವುದರಿಂದ, ಪದವಿ ಮುಗಿಸಿ ಐದು-ಹತ್ತು ವರ್ಷಗಳಿಂದ ಕೆಲಸ ಸಿಗದ ನಿರುದ್ಯೋಗಿಗಳಿಗೆ ಇದರಿಂದ ಯಾವುದೇ ಆಸರೆ ಸಿಗುವುದಿಲ್ಲ. ಸರಕಾರ ಯುವನಿಧಿ ಗ್ಯಾರಂಟಿ ಯೋಜನೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ, ಅಧ್ಯಯನ ಮುಗಿಸಿ ಕನಿಷ್ಠ 10 ವರ್ಷದಿಂದ ಕೆಲಸ ಸಿಗದಿರುವ ನಿರುದ್ಯೋಗಿ ಯುವಜನರಿಗೆ ಈ ಸೌಲಭ್ಯವನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿ ಮಾಡಲು ಹಾಗೂ ಆದ್ಯತಾ ಕ್ಷೇತ್ರವಾರು ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ ಸರಕಾರ ಕೈಗೊಳ್ಳುವ ಬಜೆಟ್ ಗಳು ಯಾವುದೇ ಚಕಾರ ಎತ್ತದಿರುವುದು ಯುವಜನರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ರಾಜ್ಯದಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಗಳಲ್ಲಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ನೌಕರರು ಸೇವೆಸಲ್ಲಿಸುತ್ತಿದ್ದು ಅವರ ಖಾಯಮಾತಿಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದರಿಂದ ಸಂಕಷ್ಟವನ್ನೆದುರಿಸುತ್ತಿದ್ದಾರೆ. ಕೂಡಲೇ ಸರಕಾರ ಇವರೆಲ್ಲರಿಗೂ ಸೇವಾಭದ್ರತೆ ಒದಗಿಸಬೇಕು ಎಂದರು.

ಈ ಹಿನ್ನೆಲೆಯಲ್ಲಿ “ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ” ಘೋಷಣೆಯಡಿ ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನವನ್ನು 2024 ಫೆಬ್ರವರಿ 25,26,27 ರಂದು ಮೂರು ದಿನಗಳ ಕಾಲ ಮಂಗಳೂರಿನಲ್ಲಿ ಹಮ್ಮಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಈ ಮೇಲ್ಕಂಡ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಹಾಗೂ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.

ಸಭೆಯನ್ನು ಉದ್ದೇಶಿಸಿ, ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಖಾಸೀಂ ಸರದಾರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ ಮಾತನಾಡಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ಡಿವೈಎಫ್ಐ ಫಕ್ರುಸಾಬ್ ಮುಜಾವರ, ಗವಿಸಿದ್ದಪ್ಪ ಚೌಡಕಿ, ಸಚಿನ ಗದಗಿನಮನಿ, ನಿಂಗಪ್ಪ ಢಾಣಾಪುರ, ಹನುಮೇಶ, ಅಮೀರಖಾನ್ ಕಾತರಕಿ, ಶಿವು‌ಮಡಿವಾಳರ, ಮೆಹಬೂಬ, ಭಾಷಾ, ವೆಂಕಟೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.