Emphasis on Women Empowerment Appreciated Teachers Students Donors BEO Venkatesh Abhimat
ಕನಕಗಿರಿಯ ಶ್ರೀ ಸಾಯಿ ಫಂಕ್ಷನ್ ಹಾಲ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರು ಸಂಘದ ಸಂಚಲನ ಪತ್ರಿಕೆ ಬಿಡುಗಡೆಗೊಳಿಸಿದರು
ಶಿಕ್ಷಕರಿಗೆ ವಿದ್ಯಾರ್ಥಿಗಳೆ ಅನ್ನದಾತರು ಬಿಇಒ ವೆಂಕಟೇಶ ಅಭಿಮತ
ಮಹಿಳಾ ಸಬಲೀಕರಣಕ್ಕೆ ಒತ್ತು ಶ್ಲಾಘನೀಯ
ಕನಕಗಿರಿ: ಶತ ಶತಮಾನದಿಂದಲೂ ಶಿಕ್ಷಣದಿಂದ ವಂಚಿತಗೊಂಡ ಶೋಷಿತ ವರ್ಗಗಳಿಗೆ ಶಿಕ್ಷಣ ನೀಡಿದ ದೇಶದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಬಾಪುಲೆಯಾಗಿದ್ದಾರೆ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಗಂಗಾವತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಇಲ್ಲಿನ ತಾಲ್ಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಶ್ರೀ ಸಾಯಿ ಫಂಕ್ಷನ್ ಹಾಲ್ ನಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ, ಶೈಕ್ಷಣಿಕ ಕಾರ್ಯಾಗಾರ, 2023 ನೇ ಸಾಲಿನಲ್ಲಿ ವರ್ಗಾವಣೆಗೊಂಡ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಹಾಗೂ ಇತರೆ ವರ್ಗದವರಿಗೆ ಶಿಕ್ಷಣ ಕೊಡಿಸುವ ಜತೆಗೆ ಪುಲೆ ಅವರು ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ, ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ ನಿಷೇಧ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಶಿಕ್ಷಕರು ಸಮಾಜ ಸುಧಾರಕರಾಗಿದ್ದು ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಬೇಕು, ಶಿಕ್ಷಕರ ನಡಾವಳಿಕೆಯನ್ನು ಯಾರು ಪ್ರಶ್ನಿಸಬಾರದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಶಿಕ್ಷಕರ ತಾಲ್ಲೂಕು ಘಟಕವು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ, ಶಿಕ್ಷಕರಿಗೆ ವಿದ್ಯಾರ್ಥಿಗಳೆ ಅನ್ನದಾತರಾಗಿದ್ದು ಕಲಿಕಾ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕೆಂದು ಎಂದು ಹೇಳಿದರು.
ಅಂತರರಾಷ್ಟ್ರೀಯ ಗಾಯಕ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ ವಾಲೇಕಾರ ಬಿನ್ನಾಳ ಮಾತನಾಡಿ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಮಹಿಳಾ ಅಸಮಾನತೆ ನಿವಾರಣೆಗೆ ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿ ಬಾಪುಲೆ ನೀಡಿದ ಕೊಡುಗೆ ಅಪಾರವಾಗಿದೆ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೆಣಸಾಡಿದ ದೇಶದ ಮೊಟ್ಟ ಮೊದಲ ಸಾಮಾಜಿಕ ಹೋರಾಟಗಾರ್ತಿ ಎಂದು ಬಣ್ಣಿಸಿದರು. ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ಇತರೆ ಸಾಧಕರು ಇಂದಿನ ಶಿಕ್ಷಕರಿಗೆ ಆದರ್ಶ ಹಾಗೂ ಸ್ಪೂರ್ತಿಯಾಗಿದ್ದಾರೆ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಶಿಕ್ಷಕ ವೃತ್ತಿ ಪಾವಿತ್ರ್ಯತೆಯಿಂದ ಕೂಡಿದೆ, ಸಾಮಾಜಿಕ ಸೇವಾ ಮನೋಭಾವನೆಯ ಶಿಕ್ಷಕರು ರೂಪಗೊಳ್ಳಬೇಕಾಗಿದೆ ಎಂದು ಹೇಳಿದರು. ಶಿಕ್ಷಕರೇ ನಿಜವಾದ ಸಾಮಾಜಿಕ ವೈದ್ಯರಾಗಿದ್ದು ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಅಂಧಶ್ರದ್ದೆ, ಲಿಂಗ ಅಸಮಾನತೆ, ಜಾತಿ ತಾರತಮ್ಯ ನಿವಾರಣೆಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿರುಪಾಕ್ಷಿ ಸ್ವಾಮಿ ಮಾತನಾಡಿ ಸಮಾಜ ಹಾಗೂ ದೇಶದ ಅಭಿವೃದ್ದಿಯಲ್ಲಿ ಶಿಕ್ಷಣದ ಪಾತ್ರ ಹಿರಿದಾಗಿದೆ, ಪ್ರಾಥಮಿಕ ಶಾಲಾ ಶಿಕ್ಷಣವು ಬದುಕಿನಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ ಮಾತನಾಡಿ ಮೂರು ವರ್ಷದ ಅವಧಿಯಲ್ಲಿ ಸಂಘವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ‘ಸಂಘದ ನಡೆ ಶಾಲೆ ಕಡೆಗೆ’, ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ಉಚಿತ ಸ್ಪರ್ಧಾತ್ಮಕ ಪುಸ್ತಕ ವಿತರಣೆ ಸೇರಿದಂತೆ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿ ಮಾದರಿಯಾಗಿದೆ ಎಂದು ತಿಳಿಸಿದರು. ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್. ಬಸವರಾಜ, ಕುಷ್ಟಗಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ನಿಡಗುಂದಿ ಹಾಗೂ ಕೊಪ್ಪಳ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಸಲೀಂ ದಡೇದ, ಬಾಳಪ್ಪ ಕಾಳೆ, ಪಿಎಸ್ ಐ ಲೋಕರಾಜ, ಶಿಕ್ಷಕರಾದ ಮಂಜುಳಾ ಶಾವಿ, ಸುಬ್ರಹ್ಮಣ್ಯ, ಶ್ರೀಧರ ಮಾತನಾಡಿದರು. ಇದೇ ಸಮಯದಲ್ಲಿ ಸಂಚಲನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ವಿವಿಧ ಇಲಾಖೆಯ ನೌಕರರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕ್ಷರ ದಾಸೋಹ ಅಧಿಕಾರಿ ಸುರೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಹಾದಿಮನಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಸತೀಶ, ನೌಕರರ ಸಂಘದ ರಾಜ್ ಪರಿಷತ್ ಸದಸ್ಯ ಡಿ. ಜಿ. ಸಂಗಮ್ಮನವರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ, ಪ್ರಾಂಶುಪಾಲ ಎನ್, ಮಾರೆಪ್ಪ, ಕಾರಟಗಿ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಬಸಪ್ಪ ವಕ್ಕಳದ, ಪ್ರಮುಖರಾದ ಶೇಖರಯ್ಯ ಕಲ್ಮಠ, ಆಹ್ಮದಹುಸೇನ, ಮಹೇಶ, ಇತರರು ಇದ್ದರು. ಮಂಜುನಾಥ ಮಾಗಳದ ಸಂಗಡಿಗರು ಪ್ರಾರ್ಥಿಸಿದರು. ದುರಗಪ್ಪ ಸ್ವಾಗತಿಸಿದರು. ಶೇಖರ ನಾಯಕ್ ಹಾಗೂ ಪವಿತ್ರ ಮಂಜುನಾಥ ನಿರೂಪಿಸಿದರು. ಜಗದೀಶ ಟಿಎಸ್ ವಂದಿಸಿದರು.