Hanumamala programme: District Collectors visited Anjanadri and personally inspected the preparations
ಕಾಲ್ನಡಿಗೆ ಮೂಲಕ ಸಂಚರಿಸಿ ಬೆಟ್ಟದ ಸುತ್ತಲಿನ ಪ್ರದಕ್ಷಿಣೆ ಪಥ ಪರಿಶೀಲಿಸಿದ ಜಿಲ್ಲಾಧಿಕಾರಿಗಳು
ಕೊಪ್ಪಳ ಡಿಸೆಂಬರ್ 20 (ಕ.ವಾ.): ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ಅಂಜನಾದ್ರಿಯಲ್ಲಿ ನಡೆಯಲಿರುವ ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯಲು ಮತ್ತು ಸ್ನಾನಕ್ಕೆ ನೀರಿನ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್ ಅವರು ಪರಿಶೀಲಿಸಿದರು.
ಡಿಸೆಂಬರ್ 20ರಂದು ಖುದ್ದು ಅಂಜನಾದ್ರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮೊದಲು ಅಂಜನಾದ್ರಿ ಬೆಟ್ಟದ ಹತ್ತಿರ, ಪಂಪಾ ಸರೋವರ, ಉತ್ಸವ ಸ್ಥಳ, ಆದಿಶಕ್ತಿ ದುರ್ಗಾದೇವಿ ಗುಡಿ ಹತ್ತಿರ, ರಾಂಪುರ, ಚಿಕ್ಕರಾಂಪುರ ಬಳಿಯಲ್ಲಿ ವಾಹನಗಳಿಗೆ ಮಾಡಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಖುದ್ದು ವೀಕ್ಷಣೆ ನಡೆಸಿದರು. ಆಯಾ ಕಡೆಗೆ ಮಾಡಿರುವ ಪಾರ್ಕಿಂಗ್ ಬಗ್ಗೆ ಜನರಿಗೆ ತಿಳಿಯುವ ಹಾಗೆ ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಚನಾ ಫಲಕ ಅಳವಡಿಸಲು ಸೂಚಿಸಿದರು.
ಬಳಿಕ ವೇದಪಾಠ ಶಾಲೆಯತ್ತ ಆಗಮಿಸಿದ ಜಿಲ್ಲಾಧಿಕಾರಿಗಳು,
ಪ್ರಸಾದ ವಿತರಣೆ ಮತ್ತು ಲಡ್ಡು ವಿತರಣೆ ಸ್ಥಳದಲ್ಲಿನ ಸಿದ್ಧತೆಯನ್ನು ಸಹ ಖುದ್ದು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆಂಜನೇಯ
ದರ್ಶನ ಮುಗಿಸಿ ಬರುವ ಭಕ್ತರು ಸಮರ್ಪಕವಾಗಿ ಪ್ರಸಾದ ಪಡೆಯುವ ಸಂದರ್ಭದಲ್ಲಿ ಜನಸಂದಣಿಯಾಗದಂತೆ ಬ್ಯಾರಿಕೇಡ್ ಬಳಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಊಟ ಕೊಡುವ ಸ್ಥಳದಲ್ಲಿ ಗದ್ದಲವಾಗದಂತೆ ಅಚ್ಚುಕಟ್ಟಾಗಿ 10 ಕೌಂಟರಗಳ ಮಾಡುತ್ತೇವೆ. ಪ್ರಸಾದ ಪಡೆದ ಬಳಿಕ ಲಡ್ಡು ವಿತರಿಸಲು ಸಹ ಸೂಕ್ತ ಸಂಖ್ಯೆಯಲ್ಲಿ ಕೌಂಟರಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದೆ ವೇಳೆ ಜಿಲ್ಲಾಧಿಕಾರಿಗಳು, ಅಡುಗೆ ಸಿದ್ದಪಡಿಸುವ ಸ್ಥಳಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಪ್ರಸಾದ ಸಿದ್ದಪಡಿಸುವ ಸ್ಥಳದ ಸುತ್ತಲು ಶುಚಿತ್ವ ಇರಬೇಕು. ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ರುಚಿಕಟ್ಟಾಗಿ ಪ್ರಸಾದ ಸಿದ್ದಪಡಿಸಲು ಕ್ರಮ ವಹಿಸಬೇಕು. ಪ್ರಸಾದ ಸ್ವೀಕರಿಸುವ ಸ್ಥಳದಲ್ಲಿ ಕುಡಿಯಲು ಮತ್ತು ಕೈತೊಳೆಯಲು ಅಗತ್ಯ ಸಂಖ್ಯೆಯಲ್ಲಿ ನಲ್ಲಿಗಳನ್ನು ಅಳವಡಿಸಬೇಕು. ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸುವ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲಾಧಿಕಾರಿಗಳು, ಆಹಾರ ಸಮಿತಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯಾವುದೇ ಅವಘಡಗಳು ಆಗದಂತೆ ಎಲ್ಲಾ ಕಡೆಗೆ ವಿದ್ಯುತ್ ಪೂರೈಕೆ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬಗೆಬಗೆಯ ವಿದ್ಯುದೀಪಗಳನ್ನು ಅಳವಡಿಸಿ ದೇವಸ್ಥಾನವನ್ನು ಅಂಜನಾದ್ರಿ ಬೆಟ್ಟವನ್ನು ಅಲಂಕಾರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು, ಜೆಸ್ಕಾಂ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳು ವೇದಪಾಠ ಶಾಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಹನುಮಮಾಲಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಚಿಸಿದ ಎಲ್ಲ ಸಮಿತಿಗಳ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಇದುವರೆಗಿನ ಸಿದ್ಧತೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ., ತಹಸೀಲ್ದಾರರಾದ ಶ್ರುತಿ, ತಾಪಂ ಇಓ ಲಕ್ಷ್ಮಿದೇವಿ, ಪೊಲೀಸ್ ಇಲಾಖೆಯ ಅಧಿಕಾರಿ
ಸಿದ್ದಲಿಂಗಪ್ಪಗೌಡ ಪಾಟೀಲ
ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕಾಲ್ನಡಿಗೆಯಲ್ಲಿ ಸಂಚಾರ: ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದಕ್ಷಿಣೆ ಪಥದಲ್ಲಿ ಜಿಲ್ಲಾಧಿಕಾರಿಗಳು ಕಾಲ್ನಡಿಗೆ ಮೂಲಕ ತೆರಳಿ ಖುದ್ದು ಪರಿಶೀಲಿಸಿದ್ದು ವಿಶೇಷವಾಗಿತ್ತು. ರಾತ್ರಿ ವೇಳೆಯಲ್ಲಿ ಕಾಲ್ನಡಿಗೆ ಕೈಗೊಂಡ ಜಿಲ್ಲಾಧಿಕಾರಿಗಳೊಂದಿಗೆ ಸಹಾಯಕ ಆಯುಕ್ತರು ಸೇರಿದಂತೆ ಇನ್ನೀತರ ಅಧಿಕಾರಿಗಳು ಹೆಜ್ಜೆ ಹಾಕಿದರು.