Sharan brother Shankranna’s shop is no more!
ಬಸವ ಬೆಳಕು -೧೦೦ ಕಾರ್ಯಕ್ರಮಕ್ಕೆ ಗದಗನಲ್ಲಿ ವಾಸವಾಗಿದ್ದ ಶಂಕ್ರಣ್ಣ ಅಂಗಡಿ ನಮ್ಮ ಬಸವ ಬೆಳಕು ಸಭೆಗೆ ಬಂದಿದ್ದರು. ನಾನು ಮಡದಿ ಶರಾವತಿ ಇತರರು ಕಾರ್ಯಕ್ರಮದ ತಯಾರಿಗಾಗಿ ಸ್ವತಃ ನಾವೇ ಅಂಗಳ ಸ್ವಚ್ಛ ಮಾಡುವುದು, ಖುರ್ಚಿ ಎತ್ತಿಡುವುದು, ಮೈಕ್, ಎಂಪ್ಲಿಫೈಯರ್ ,ಡಯಾಸ ಎತ್ತಿಟ್ಟು ಲವಲವಿಕೆಯಿಂದ ಓಡಾಡುವುದನ್ನು ಕಣ್ಮುಂಬ ನೋಡಿದ್ದರು. ಅಷ್ಟೆ ಅಲ್ಲ ಅದನ್ನು ಮನವಾರೆ ಮೆಚ್ಚಿಕೊಂಡು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಗೆ ಕರೆದು ತೋರಿಸಿ ಪ್ರತ್ಯಕ್ಷ ಪ್ರದರ್ಶನ ಮಾಡಿಸಿದ್ದರಂತೆ.
ಕಳೆದ ವರ್ಷ ಮೇ ೨೦೨೨ ರ ತಿಂಗಳ ಬಸವ ಬೆಳಕು ಕಾರ್ಯಕ್ರಮಕ್ಕೆ ಅವರೇ ಅತಿಥಿಯಾಗಿ ಬಂದು ಡಾ.ಫ.ಗು.ಹಳಕಟ್ಟಿಯವರ ಬಗ್ಗೆ ಮನೋಜ್ಞವಾಗಿ ಮಾತನಾಡಿದ್ದರು. ಆಗಾಗ ತಿಂಗಳ ಬಸವ ಬೆಳಕು ಸಭೆ, ಇತ್ಯಾದಿ ವಿಷಯ ಕುರಿತು ಚರ್ಚಿಸುತ್ತಿದ್ದರು.
ಆದರೆ ತೀರಾ ಇತ್ತೀಚೆಗೆ ಒಂದೆರಡು ತಿಂಗಳ ಹಿಂದೆ ನಿಜಗುಣಾನಂದ ಸ್ವಾಮೀಜಿ ಮಾತನಾಡಿ ಶಂಕ್ರಣ್ಣನಿಗೆ ಕ್ಯಾನ್ಸರ್ ಕಾಯಿಲೆ ಎಂದು ಬರ ಸಿಡಿಲಿನ ಮಾತು ಹೇಳಿದರು.
ಶಂಕ್ರಣ್ಣ ಅತ್ಯಂತ ಕಡು ಬಡತನದ ಹಿನ್ನೆಲೆಯಿಂದ ಬಂದವರು. ಸಮಾಜದ ಜನಗಳ ಅವಕೃಪೆ, ಬರ್ತ್ಸನೆಯ ನೋಟಗಳಿಗೆ ಗುರಿಯಾದವರು. ಆದರೆ ಅಪ್ಪ ಬಸವಣ್ಣನವರ ವಚನಗಳ ಓದು ಅವರನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿತ್ತು. ಅದುವರೆಗೆ ಇವನಾರವ ಇವನಾರವ ಎಂದು ದೂಡುತ್ತಿದ್ದ ಸಮಾಜ, ಇವ ನಮ್ಮವ ಇವ ನಮ್ಮವ ಎಂದು ತಬ್ಬಿಕೊಂಡಿತು.
ಬಸವ ತತ್ವದ ಬದ್ಧತೆ ಕೆಲವರ ಕೆಂಗಣ್ಣಿಗೂ ಪಾತ್ರವಾದದ್ದು ಇದೆ. ಆದರೆ ಶಂಕ್ರಣ್ಣ ಮಾತ್ರ ತಾನು ನಂಬಿದ್ದ ಶರಣ ತತ್ವಗಳನ್ನು ಪ್ರಚುರ ಪಡಿಸುತ್ತ, ತನ್ನ ನೌಕರಿ ಮಾಡುತ್ತ ನಡೆದಿದ್ದ. ಮಕ್ಕಳು, ಕುಟುಂಬದ ಜನ ಒಂದು ಕಡೆ ಸೆಟಲ್ ಆದರು ಎಂದು ನಿರುಮ್ಮಳವಾಗುತ್ತಲೆ ಈ ಕ್ಯಾನ್ಸರ್ ಎಲ್ಲಿಂದ ಬಂದು ಅಟಕಾಯಿಸಿತೊ ?
ಬದುಕು ತುಂಬಾ ಅಮಾನವೀಯವಾದದ್ದು. ನಾನು ಶಂಕ್ರಣ್ಣನ ಫೋನ್ ನಲ್ಲಿ ಮಾತನಾಡಿಸಿದೆ. ಆತನಿಗೆ ಆಗಲೇ ಗೊತ್ತಾಗಿತ್ತು.ಸರ್… ನನಗೆ ಕ್ಯಾನ್ಸರ್ ಅಂದ. ಎಷ್ಟನೆ ಸ್ಟೇಜ್ ? ಅಂದೆ. ಕೊನೆಯ ಸ್ಟೇಜ್ ಅಂದರು. ನನಗೆ ಎದೆ ದಸಕ್ ಅಂತು. ಆದರೂ ಮಾಮೂಲಿಯಾಗಿ ನಿಮಗೇನೂ ಆಗೋಲ್ಲ,ಮತ್ತೆ ಆರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ ಅಂದೆ. ಆ ಕಡೆಯಿಂದ ಕ್ಷೀಣ ಧ್ವನಿ.
ಮತ್ತೆ ಒಂದೆರಡು ತಿಂಗಳು ಸರಿದು ಹೋದವು. ಜೀವನ ಜಂಜಡದ ಬದುಕು. ನಾವು ಅಂದುಕೊಂಡಂತೆ ಮುನ್ನಡೆಯಲಾರದು. ಕೊನೆಯದಾಗಿ ಅವರನ್ನು ಗದುಗಿನ ಆಸ್ಪತ್ರೆಯಲ್ಲಿ ಭೇಟಿ ಆಗಬೇಕೆಂದೆ. ಏನೇನೋ ಕೆಲಸಗಳು, ಇನ್ನೇನೇನೋ ಬರವಣಿಗೆ. ಇವುಗಳ ನಡುವೆ ಶಂಕ್ರಣ್ಣನ ಭೇಟಿ ಆಗಲಿಲ್ಲ.
ಈಗ ನೋಡಿದರೆ ಈ ಶರಣ ಶಂಕ್ರಣ್ಣ ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಛೇ…… ಈ ಹಾಳು ಬದುಕು
೦ ವಿಶ್ವಾರಾಧ್ಯ ಸತ್ಯಂಪೇಟೆ