Breaking News

ನೀರಿನಸಮಸ್ಯೆಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿಕಂದಾಯಸಚಿವ ಕೃಷ್ಣ ಬೈರೇಗೌಡ

Finance Minister Krishna Byre Gowda takes precautions to prevent water problems

ಜಾಹೀರಾತು
IMG 20231107 WA0371 300x166

ಕಂದಾಯ ಸಚಿವರಾಧ ಕೃಷ್ಣ ಬೈರೇಗೌಡ ಅವರಿಂದ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ ನವೆಂಬರ್ 07 (ಕರ್ನಾಟಕ ವಾರ್ತೆ): ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಅವರು ನವೆಂಬರ್ 7ರಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬರ ನಿರ್ವಹಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸುಧೀರ್ಘ 4 ಗಂಟೆಗು ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಸವಿವರವಾಗಿ ಚರ್ಚಿಸಿ ಬಳಿಕ ಮಾತನಾಡಿದ ಸಚಿವರು, ಮಳೆ ಬಾರದೇ ಇರುವುದರಿಂದ ಯಾವುದೇ ಕಡೆಗಳಲ್ಲಿ ನೀರಿನ ಸಮಸ್ಯೆಗಳು ಕಂಡು ಬಂದಲ್ಲಿ ಅಂತಹ ಕಡೆ 24 ಗಂಟೆಯೊಳಗಡೆ ನೀರು ಪೂರೈಕೆ ಮಾಡುವ ಹಾಗೆ ಎಲ್ಲ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಸಮಸ್ಯೆ ಉದ್ಭವವಾಗುವ ಮೊದಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಂದಾಯ, ಆರ್‌ಡಿಪಿಆರ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳನ್ನೊಳಗೊಂಡು ಒಂದು ಟಾಸ್ಕಪೋರ್ಸ ಮಾಡಬೇಕು. ಮುಂಜಾಗ್ರತಾ ಕ್ರಮವಾಗಿ ಗ್ರಾಮವಾರು ಸಮಸ್ಯೆ ತಲೆದೋರಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಬೇಕು. ಟ್ಯಾಂಕರ್ ಪೂರೈಕೆಗೆ ಟೆಂಡರ್ ಪ್ರಕ್ರಿಯೆ ಮತ್ತು ಖಾಸಗಿ ಬೋರವೆಲ್ ಗುರುತಿಸಿ ಸಿದ್ಧತೆಯಲ್ಲಿರಬೇಕು. ಖಾಸಗಿ ಬೋರವೆಲ್‌ದಿಂದ ಪೈಪಲೈನ್ ಮಾಡುವಂತಹ ಕಡೆಗೆ ಅದಕ್ಕೆ ತಗುಲುವ ವೆಚ್ಚದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಸಿದ್ಧತೆಯಲ್ಲಿರಬೇಕು. ಈ ವಿಷಯದಲ್ಲಿ ತಹಸೀಲ್ದಾರರು, ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಕುಡಿಯುವ ನೀರಿಗೆ ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದೆ. ಪ್ರಕೃತಿ ವಿಕೋಪದ ಪರಿಹಾರ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಹಣ ಲಭ್ಯವಿದೆ. ಕಳೆದ ವಾರ 11 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೆರಡು ವಾರದೊಳಗೆ ತಲಾ 50 ಲಕ್ಷ ರೂ.ಗಳನ್ನು ಆಯಾ ತಾಲೂಕುಗಳಿಗೆ ನೀಡಲಾಗುವುದು. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎಲ್ಲು ಸಹ ಕಂಡು ಬಂದಿಲ್ಲ. ಸಮಸ್ಯೆ ಕಂಡು ಬಂದಲ್ಲಿ ಖಾಸಗಿ ಬೋರವೆಲ್‌ಗಳನ್ನು ಬಾಡಿಗೆ ಪಡೆದುಕೊಳ್ಳಲು ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲು ಅನುದಾನ ಬಳಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಫ್ರೂಟ್ಸ್ ಡೇಟಾಬೇಸ್‌ನಲ್ಲಿ ರೈತರ ಹೆಸರು, ಆಧಾರ್ ಮಾಹಿತಿಯ ನೋಂದಣಿ ಇದೆ. ಇದರಲ್ಲಿ ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣ ಕೂಡ ಇರಬೇಕು. ಎಷ್ಟು ಪ್ರಮಾಣದ ವಿಸ್ತೀರ್ಣದ ಮಾಹಿತಿ ಇರುತ್ತದವೋ ಅಷ್ಟಕ್ಕೆ ಮಾತ್ರ ಪರಿಹಾರ ಸಿಗುತ್ತದೆ. ಇಲ್ಲದಿದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಗುವುದಿಲ್ಲ. ಈಗ ಶೇ.65ರಷ್ಟು ಮಾತ್ರ ವಿಸ್ತೀರ್ಣದ ವಿವರ ದಾಖಲಾಗಿದೆ. ಇನ್ನು ಶೇ.35ರಷ್ಟು ವಿಸ್ತೀರ್ಣ ಸೇರಿಸುವುದು ಬಾಕಿ ಇದೆ. ಈ ಬಾಕಿ ವಿಸ್ತೀರ್ಣದ ವಿವರವನ್ನು ಫ್ರೂಟ್ ಡೇಟಾಬೇಸನಲ್ಲಿ ಸೇರಿಸುವ ಕಾರ್ಯವನ್ನು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳು ಒಗ್ಗೂಡಿ ವಾರದೊಳಗಡೆ ಅಭಿಯಾನ ಮಾದರಿಯಲ್ಲಿ ನಡೆಸಬೇಕು ಎಂದು ಇದೆ ವೇಳೆ ಸಚಿವರು ಅಧಿಕಾರಿಗಳಿಗೆ ಗಡುವು ವಿದಿಸಿದರು.
ಇ-ಆಫೀಸ್ ಬಳಕೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ಇದೆ. ಆದರೆ, ಎಲ್ಲಾ ಕಡತಗಳು ಇ-ಆಫೀಸ್ ಮೂಲಕ ವಿಲೇವಾರಿಯಾಗುತ್ತಿಲ್ಲ. ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡಿದಲ್ಲಿ ಎಲ್ಲಾ ಕೆಲಸಗಳು ವೇಗ ಪಡೆಯುತ್ತವೆ. ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತದೆ. ಹೀಗಾಗಿ ಶೀಘ್ರದಲ್ಲಿ ಕೊಪ್ಪಳದಲ್ಲಿ ಇ-ಆಫೀಸ್ ಅನ್ನು ಶೇ.100 ರಷ್ಟು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ತಮ್ಮದೇ ಕೃಷಿ ಭೂಮಿಗೆ ಓಡಾಡಲು ರಸ್ತೆ ಇಲ್ಲದಂತಹ ರೈತರು ಇದ್ದಾರೆ. ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿಯೇ ಕಳೆದ ವಾರ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು ಎಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳನ್ನು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಎಲ್ಲಾ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು. ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಮುನ್ನ ಅಂತಹ ಪ್ರದೇಶಗಳಲ್ಲೂ ಕೃಷಿ ಭೂಮಿಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಮುಂದಿನ ಆರು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು. ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 36 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ 27 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಿ ಹಕ್ಕುಪತ್ರ ನೀಡುವ ಕಾರ್ಯವನ್ನು ಸಹ ಅಭಿಯಾನ ಮಾದರಿಯಲ್ಲಿ ನಡೆಸಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಬಗರ್ ಹುಕುಂ ತಂತ್ರಾAಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಈ ಪ್ರಕ್ರಿಯೆಗೆ ಆ್ಯಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆ್ಯಪ್ ಅಧಿಕಾರಿಗಳ ಕೈಸೇರಲಿದೆ. ಇದರ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು. ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಅನುದಾನ ಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತರಾದ ಪಿ.ಸುನೀಲ್‌ಕುಮಾರ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.