Breaking News

ಹೊಸದಾಗಿರಚನೆಯಾಗಿರುವಕಂದಾಯಗ್ರಾಮಗಳಲ್ಲಿನಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಿ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೇ ಹೊಸದಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳಲ್ಲಿನ ಫಲಾನುಭವಿಗಳಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ಸೂಕ್ತ ಕ್ರಮ ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರದಂದು ಜಿಲ್ಲೆಯಲ್ಲಿ ಹೊಸದಾಗಿ ರಚಿಸಬೇಕಾಗಿರುವ ಕಂದಾಯ ಗ್ರಾಮಗಳ ಕುರಿತು ಹಾಗೂ ಈಗಾಗಲೇ ಹೊಸದಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳಲ್ಲಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ 8, ಗಂಗಾವತಿ ತಾಲ್ಲೂಕಿನಲ್ಲಿ 3, ಕುಷ್ಟಗಿ ತಾಲ್ಲೂಕಿನಲ್ಲಿ 6, ಯಲಬುರ್ಗಾ ತಾಲ್ಲೂಕಿನಲ್ಲಿ 7, ಕನಕಗಿರಿ ತಾಲ್ಲೂಕಿನಲ್ಲಿ 3 ಹಾಗೂ ಕಾರಟಗಿ ತಾಲ್ಲೂಕಿನಲ್ಲಿ 9 ಸೇರಿದಂತೆ ಒಟ್ಟು 36 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ 35 ಗ್ರಾಮಗಳಿಗೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅದರನ್ವಯ 35 ಪ್ರಸ್ತಾವನೆಗಳಿಗೆ ಪ್ರಾಥಮಿಕ ಅಧಿಸೂಚನೆಯನ್ನು ಹಾಗೂ 27 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗಳಿಂದ 7 ಪ್ರಸ್ತಾವನೆಗಳು ಬರುವುದು ಬಾಕಿ ಇದೆ. ಬಾಕಿ ಉಳಿದ ಪ್ರಕರಣಗಳಲ್ಲಿ ಇರುವ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರದಲ್ಲಿ ಸಂಬಂಧಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಿ ಎಂದು ಅವರು ತಹಶೀಲ್ದಾರರು ಹಾಗೂ ನಗರ ತಾಲ್ಲೂಕು ಪಂಚಾಯತಿ , ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇಂತಹ ಪ್ರಕರಣಗಳಲ್ಲಿ ಸೂಕ್ತ ದಾಖಲೆಗಳ ಸಹಿತ ನ್ಯಾಯಾಲಯಕ್ಕೆ ವಾಸ್ತವಾಂಶಗಳನ್ನು ತಿಳಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ವಹಿಸಿ. ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರ ಹಂತದಲ್ಲಿರುವ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಿ. ಜಿಲ್ಲೆಯಲ್ಲಿ ಹೊಸದಾಗಿ ರಚಿಸಬೇಕಾಗಿರುವ ಕಂದಾಯ ಗ್ರಾಮಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ನು, ಮಾನದಂಡಗಳನ್ನು ಅನುಸರಿಸಿ ಅಗತ್ಯ ಕ್ರಮ ವಹಿಸಿ. ಇಂತಹ ವಿಷಯಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಕಾರ್ಯನಿರ್ವಹಿಸಬೇಕು. ನಿರ್ದಿಷ್ಟ ಕಾಲಮಿತಿಯನ್ನು ಹಾಕಿಕೊಂಡು ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಅಭಿವೃದ್ಧಿ ಕುರಿತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.