Karatagi-Hubli Railway: Request to MP Karadi to extend it to Dharwad city.
ಗಂಗಾವತಿ: ಕಾರಟಗಿ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಎರಡು ರೇಲ್ವೆಗಳಲ್ಲಿ ಒಂದು ರೇಲ್ವೆಯನ್ನು ಧಾರವಾಡ ನಗರದವರೆಗೆ ಮತ್ತು ಇನ್ನೊಂದನ್ನು ಗೋವಾದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕೊಪ್ಪಳ ಸಂಸದ ಸಂಗಣ್ಣ ಕರಡಿಯವರನ್ನು
ಒತ್ತಾಯಿಸಿದ್ದಾರೆ.
ಸೋಲಾಪುರ ರೇಲ್ವೆಯನ್ನು ಗಂಗಾವತಿಯವರೆಗೂ ವಿಸ್ತರಿಸುವಂತೆ ಸಂಸದರು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದು, ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇಷ್ಟರಲ್ಲಿಯೇ ಸೋಲಾಪುರ ರೇಲ್ವೆ ಸೌಲಭ್ಯ ಕೂಡ ಈ ಭಾಗದ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಮ್ಯಾನೇಜಿಂಗ್ ಕಮಿಟಿ ಸದಸ್ಯರೂ ಆದ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ ನಗರ ಮತ್ತು ಗೋವಾ ರಾಜ್ಯದವರೆಗೂ ರೇಲ್ವೆ ಸಂಚಾರವನ್ನು ವಿಸ್ತರಿಸುವ ಯೋಜನೆ ಕೆಲವೇ ತಿಂಗಳುಗಳಲ್ಲಿ ಕೈಗೂಡಲಿದೆ ಎಂದವರು ಅಶಾ ಭಾವನೆ ವ್ಯಕ್ತ ಪಡಿಸಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕಾರ ದರೋಜಿ-ಗಂಗಾವತಿ
ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಿಸಲು ಬೇಕಾದ ಅಂದಾಜು ವೆಚ್ಚದ ವರದಿ ಅಕ್ಟೋಬರ್ ಅಂತ್ಯದಲ್ಲಿ ಹಾಗೂ ಗಂಗಾವತಿ-ಬಾಗಲಕೋಟ ರೇಲ್ವೆ ಲೈನ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ವರದಿ ಡಿಸೆಂಬರ್ ಅಂತ್ಯದಲ್ಲಿ ರೇಲ್ವೆ ಇಲಾಖೆಯ ಕೈ ಸೇರಲಿದೆ.
ಈ ವರದಿಯ ನಿರೀಕ್ಷೆಯಲ್ಲಿರುವ ಸಂಸದ ಸಂಗಣ್ಣನವರು, ನೂತನ ರೇಲ್ವೆ ಲೈನ್ ಗಳ ನಿರ್ಮಾಣಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಿಸಲು ಉತ್ಸುಕರಾಗಿದ್ದಾರೆಂದು ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.