—
ಕೊಪ್ಪಳ ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದ
ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಚಾಲನೆ ನೀಡಿದರು.
ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕೊಪ್ಪಳ ತಾಲೂಕಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೆಪ್ಟೆಂಬರ್ 21ರಂದು ಹಮ್ಮಿಕೊಂಡಿದ್ದ ಮೂರು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿಇಓ ಅವರು,
ಆಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ
ನೈರ್ಮಲ್ಯ ಕಾಪಾಡುವಲ್ಲಿ, ಗ್ರಾಮದ ಪ್ರತಿಯೊಬ್ಬರು ಶೌಚಾಲಯಗಳನ್ನು ಬಳಕೆ ಮಾಡುವಲ್ಲಿ, ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ, ಆಯಾ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳ ಆವರಣದಲ್ಲಿ ಶುಚಿತ್ವ ಕಾಪಾಡುವಲ್ಲಿ, ಗ್ರಾಮದ ವಿದ್ಯಾರ್ಥಿ ಯುವಜನರಲ್ಲಿ ಓದುವಿಕೆ, ಕೌಶಲತೆ ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಆಯಾ ಗ್ರಾಮ ಪಂಚಾಯತಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಯಾವುದೇ ಪಂಚಾಯಿತಿ ಇರಲಿ ಯಾವುದೇ ಊರು ಇರಲಿ ಇದು ನಮ್ಮ ಪಂಚಾಯಿತಿ, ಇದು
ನಮ್ಮೂರು, ಇದು ನನ್ನ ಗ್ರಾಮ, ಇವರು ನಮ್ಮ ಜನರು ಎನ್ನುವ ಭಾವನೆಯನ್ನು ಪ್ರತಿಯೊಬ್ಬರು ಹೊಂದಬೇಕು. ಈ ರೀತಿಯ ಕಾಳಜಿ ಹೊಂದಿದಾಗ ಮಾತ್ರ ಏನನ್ನಾದರು ಮಾಡಲು ಸಾಧ್ಯವಾಗುತ್ತದೆ. ಜನಸೇವೆ ಮಾಡುವ ಅವಕಾಶ ಸಿಗುವುದು ಅಪರೂಪ. ಹೀಗಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಂತಹ ಅವಕಾಶವಿದೆ. ತಮ್ಮ ಆಡಾಳಿತಾವಧಿಯಲ್ಲಿ ಗ್ರಾಮಸ್ಥರು ಮೆಚ್ಚುವ ಹಾಗೆ ಕೆಲಸ ಮಾಡಬೇಕು ಎಂದು ಸಿಇಓ ಅವರು ಸಲಹೆ ಮಾಡಿದರು. ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕರ್ತವ್ಯಗಳ ಬಗ್ಗೆ ಸಿಇಓ ಅವರು ಇದೆ ವೇಳೆ ವಿವರಿಸಿದರು.
*ಪ್ರತಿಜ್ಞಾವಿಧಿ ಸ್ವೀಕಾರ:* ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 02ರವರೆಗೆ ನಡೆಯುತ್ತಿರುವ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಎಲ್ಲಾ ಶಿಬಿರಾರ್ಥಿಗಳಿಗೆ ಸಿಇಓ ಅವರು ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿಗಳಾದ ಮಂಜುನಾಥ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ತಾಪಂ ಲೆಕ್ಕಾಧಿಕಾರಿಗಳು ಹಾಗೂ ತರಬೇತಿದಾರಾದ ಹೆಚ್.ಎಸ್ ಹೊನ್ನುಚಿ, ಭೀಮಪ್ಪ ಹವಳ್ಳಿ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.