The district collector drives for monsoon season crop harvesting experiment

ಕೊಪ್ಪಳ ಜುಲೈ 20 (ಕರ್ನಾಟಕ ವಾರ್ತೆ): 2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಗ್ರಾಮ ಪಂಚಾಯತ್‌ವಾರು ಮತ್ತು ಹೋಬಳಿವಾರು ಬೆಳೆ ಕಟಾವು ಪ್ರಯೋಗ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜುಲೈ 20ರಂದು ನಡೆದ ಸಭೆಯಲ್ಲಿ ಬೆಳೆ ಕಟಾವು ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಅನುಷ್ಠಾನಗೊಳಿಸಬೇಕು. ಮುಖ್ಯ ಬೆಳೆಗಳು ಹಾಗೂ ಇತರೆ ಬೆಳೆಗಳನ್ನು ತಾಲೂಕುವಾರು ಪರಿಗಣಿಸಬೇಕು. ಆಯಾ ತಾಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಬೇಕು ಎನ್ನುವ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆಯಡಿ 2023-24ರ ಮುಂಗಾರು ಹಂಗಾಮಿನಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಸ್ಥಳೀಯ ತಾಲೂಕು ಹೋಬಳಿ ಮಟ್ಟದ ಕೃಷಿ, ತೋಟಗಾರಿಕಾ ಸೇರಿದಂತೆ ಇನ್ನೀತರ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಬೆಳೆ ಅಂದಾಜು ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಆ್ಯಪ್ ಮೂಲಕ ಬೆಳೆ ಅಂದಾಜು ಸಮೀಕ್ಷೆ ನಡೆಸಬೇಕು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಇದರ ಮೇಲುಸ್ತುವಾರಿ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಯಾವುದೇ ಬೆಳೆ ಕಟಾವು ಪ್ರಯೋಗಗಳನ್ನು ಲ್ಯಾಪ್ಸ್ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
2023-24ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಹೋಬಳಿ ಮಟ್ಟಕ್ಕೆ ಅಧಿಸೂಚಿಸಿದ ನೀರಾವರಿ ಮಳೆ ಆಶ್ರಿತ ಭತ್ತ, ನೀರಾವರಿ ಆಶ್ರಿತ ಮೆಕ್ಕೆಜೋಳ, ನೀರಾವರಿ ಹಾಗೂ ಮಳೆ ಆಶ್ರಿತ ಜೋಳ, ನೀರಾವರಿ ಹಾಗೂ ಮಳೆ ಆಶ್ರಿತ ಸಜ್ಜೆ, ನೀರಾವರಿ ಮತ್ತು ಮಳೆ ಆಶ್ರಿತ ತೊಗರಿ, ಮಳೆ ಆಶ್ರಿತ ಹುರಳಿ, ನೀರಾವರಿ ಆಶ್ರಿತ ಸೂರ್ಯಕಾಂತಿ ಬೆಳೆಗಳಿಗೆ ಜುಲೈ 31ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿತ ಬೆಳೆಯಾದ ಭತ್ತ (ನೀರಾವರಿ) ಬೆಳೆಗೆ ಸಹ ಜುಲೈ 31ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಇದೆ ವೇಳೆ, ಹಿಂಗಾರು ಹಂಗಾಮಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿಯನ್ನು ಅಂತಿಮಗೊಳಿಸಲಾಯಿತು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಂ.ಮಲ್ಲಯ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಅಭಿಯಂತರರಾದ ಹರ್ಷವರ್ದನ್ ಎಸ್., ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜುಳಾ, ರೇಷ್ಮೆ ಇಲಾಖೆಯ ಅಕ್ಕಮಹಾದೇವಿ ಬಡಿಗೇರ ಸೇರಿದಂತೆ ಇನ್ನೀತರರು ಇದ್ದರು.
Kalyanasiri Kannada News Live 24×7 | News Karnataka
