ಲಕ್ನೋ, ಜೂನ್ 27: ಮುಂಬರುವ ಚುನಾವಣೆಗಳಲ್ಲಿ ಬಹುಜನ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ನಿರೀಕ್ಷೆಹೊಂದಿದ್ದ ಅಸಾಸುದ್ದೀನ್ ಒವೈಸಿಗೆ ನಿರಾಶೆಯಾಗಿದೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ, ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯವತಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಚುನಾವಣೆಗಾಗಿ ಒವೈಸಿ ಅವರ ಎಐಎಂಐಎಂ ಜೊತೆ ಬಿಎಸ್ಪಿ ಮೈತ್ರಿ ಸಾಧಿಸಿವೆ ಎಂಬ ವರದಿಗಳನ್ನು ಮಾಯಾವತಿ ತಳ್ಳಿ ಹಾಕಿದ್ದಾರೆ.

ಆದರೆ, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ ಜೊತೆ ಮಾತ್ರ ಮೈತ್ರಿ ಸಾಧಿಸಲಾಗಿದೆ ಎಂದಿದ್ದಾರೆ. 117 ವಿಧಾನಸಭೆ ಕ್ಷೇತ್ರಗಳ ಪೈಕಿ ಅಕಾಲಿದಳ 97 ಕ್ಷೇತ್ರ ಹಾಗೂ ಬಿಎಸ್ಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.
ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮೈತ್ರಿ ಬಗ್ಗೆ ಮಾತನಾಡಿ, ಹಳೆ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಮಾಜವಾದಿ ಪಕ್ಷ ಯಾವುದೇ ದೊಡ್ಡ ಪಕ್ಷದ ಜೊತೆ ಮೈತ್ರಿ ಸಾಧಿಸುವುದಿಲ್ಲ ಎಂದರು. ಆದರೆ, ಸಮಾನ ಮನಸ್ಕ ಸಣ್ಣಪುಟ್ಟ ಪಕ್ಷಗಳ ಜೊತೆ ಸೀಟು ಹಂಚಿಕೆ ಸಾಧ್ಯತೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಸುಳಿವು ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶದ ಮತದಾರರು ಎಂದೋ ದೂರ ಇರಿಸಿದ್ದಾರೆ. 2017ರಲ್ಲಿ 100 ಕ್ಷೇತ್ರಗಳನ್ನು ನೀಡಿದರು ನಮಗೆ ಗೆಲುವು ದಕ್ಕಲಿಲ್ಲ, ಬಿಜೆಪಿ ಸೋಲಿಸಲು ಕಾಂಗ್ರೆಸ್ ಬಳಿ ಈಗ ಶಕ್ತಿ ಇಲ್ಲ ಎಂದಿದ್ದಾರೆ.
2022ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ಅಲ್ಲದೆ ದೇಶದ ವಿವಿಧೆಡೆ ಉಪ ಚುನಾವಣೆಗಳನ್ನು ಕೋವಿಡ್ 19 ಸಾಂಕ್ರಾಮಿಕದ ನಡುವೆ ಆಯೋಜಿಸಲಾಗಿತ್ತು. ಹೆಚ್ಚಿನ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಸಹಕರಿಸಿದ್ದರು