ತಾಜಾ ಸುದ್ದಿರಾಜಕೀಯ ಸುದ್ದಿರಾಷ್ಟ್ರೀಯ ಸುದ್ದಿ

ಕುಂಭಮೇಳದಲ್ಲಿ ನಕಲಿ ಕೊರೊನಾ ಪರೀಕ್ಷಾ ವರದಿ; FIR ದಾಖಲಿಸಲು ಉತ್ತರಾಖಂಡ ಸರ್ಕಾರ ಆದೇಶ

ನವದೆಹಲಿ, ಜೂನ್ 17: ಈ ಬಾರಿ ಹರಿದ್ವಾರದಲ್ಲಿ ಮಹಾ ಕುಂಭಮೇಳದ ಸಮಯ ನಡೆಸಲಾದ ಕೊರೊನಾ ಪರೀಕ್ಷೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಹರಿದ್ವಾರ ಜಿಲ್ಲಾಡಳಿತಕ್ಕೆ ಉತ್ತರಾಖಂಡ ಸರ್ಕಾರ ಗುರುವಾರ ಆದೇಶಿಸಿದೆ.

ಕುಂಭಮೇಳದ ಸಮಯದಲ್ಲಿ ಸುಮಾರು 22 ಖಾಸಗಿ ಲ್ಯಾಬ್‌ಗಳನ್ನು ಕೊರೊನಾ ಪರೀಕ್ಷೆ ನಡೆಸಲು ನೇಮಕ ಮಾಡಿಕೊಳ್ಳಲಾಗಿತ್ತು. ಏಪ್ರಿಲ್ 1ರಿಂದ 30ರವರೆಗೂ ನಡೆದ ಕುಂಭಮೇಳದಲ್ಲಿ ದೆಹಲಿ, ಹರಿಯಾಣದ ಹಲವು ಖಾಸಗಿ ಲ್ಯಾಬ್‌ಗಳು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದವು.

ಹರಿದ್ವಾರ, ಋಷಿಕೇಶ, ಡೆಹ್ರಾಡೂನ್, ಮುನಿ ಕಿ ರೇಟಿಯ ತೆಹ್ರಿ ಹಾಗೂ ಪುರಿ ಸ್ವರ್ಗಾಶ್ರಮದಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಆದರೆ ಕುಂಭಮೇಳದ ಸಮಯದಲ್ಲಿ ಕೊರೊನಾ ಪರೀಕ್ಷೆಯ ನಕಲಿ ವರದಿಗಳನ್ನು ನೀಡಲಾಗಿದೆ ಎಂಬ ವರದಿ ಕಳೆದ ವಾರ ಹೊರಬಿದ್ದಿತ್ತು. ಸುಮಾರು ಒಂದು ಲಕ್ಷ ಕೊರೊನಾ ಪರೀಕ್ಷೆಯ ನಕಲಿ ವರದಿ ನೀಡಿರುವುದು ಬೆಳಕಿಗೆ ಬಂದಿತ್ತು. ಆ ನಂತರ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು.

ನಕಲಿ ವರದಿ ಬಗ್ಗೆ ಪರೀಕ್ಷೆ ನಡೆಸಲು ಮುಖ್ಯ ಅಭಿವೃದ್ಧಿ ಅಧಿಕಾರಿ ನೇತೃತ್ವದ ಮೂರು ಸದಸ್ಯರ ಸಮಿತಿ ರಚಿಸಲಾಗಿತ್ತು. ಇದೀಗ ಪರೀಕ್ಷೆ ನಡೆಸಿ ನಕಲಿ ವರದಿಗಳನ್ನು ನೀಡಿದ ದೆಹಲಿ ಹಾಗೂ ಹರಿಯಾಣ ಪ್ರಯೋಗಾಲಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಕುಂಭಮೇಳದ ಸಂದರ್ಭ ಎರಡು ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 2600 ಭಕ್ತರಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿತ್ತು. ಜೊತೆಗೆ ಕುಂಭಮೇಳದ ಅವಧಿ ನಡೆಸಲಾದ ಕೊರೊನಾ ಪರೀಕ್ಷೆಯ ಅಂಕಿ ಅಂಶಗಳನ್ನು, ಅದರ ಫಲಿತಾಂಶವನ್ನು, ಮಾಹಿತಿಯನ್ನು ನಿಖರವಾಗಿ ಹಂಚಿಕೊಂಡಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

”ಕುಂಭ ಮೇಳದ ಅವಧಿಯಲ್ಲಿ 10 ಐಸಿಎಂಆರ್ ಅನುಮೋದಿತ ಖಾಸಗಿ ಲ್ಯಾಬ್‌ಗಳಲ್ಲಿ ‌ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ಸೇರಿದಂತೆ 2.52 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಲ್ಯಾಬ್‌ಗಳಿಗೆ 9.45 ಕೋಟಿ ರೂ. ಹಣ ನೀಡಬೇಕಾಗಿದೆ. ತನಿಖೆಯಲ್ಲಿರುವ ಲ್ಯಾಬ್‌ಗೆ ಇನ್ನೂ ಹಣ ಪಾವತಿ ಮಾಡಿಲ್ಲ” ಎಂದುಕುಂಭಮೇಳ ಆರೋಗ್ಯ ಅಧಿಕಾರಿ ಅರ್ಜುನ್ ಸಿಂಗ್ ಸೆಂಗಾರ್ ತಿಳಿಸಿದ್ದಾರೆ.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ