ರಾಜಕೀಯ ಸುದ್ದಿ

ದೇವೇಗೌಡ-ಯಡಿಯೂರಪ್ಪ ‘ವಿಶ್ವಾಸ’ ರಾಜಕೀಯ: ಎಚ್ಡಿಕೆ ಸ್ಪಷ್ಟನೆ

ಬೆಂಗಳೂರು, ಜೂನ್ 15: ನಾಯಕತ್ವ ಬದಲಾವಣೆಯಾಗಿ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾದ ಪರಿಸ್ಥಿತಿ ಬಂದರೆ, ಅವರು ದೇವೇಗೌಡ್ರ ಬೆಂಬಲವನ್ನು ಪಡೆಯಬಹುದು ಎನ್ನುವ ಸುದ್ದಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ.

“ಈಗ ಬಿಜೆಪಿಯಲ್ಲಿ ನಡೆಯುತ್ತಿರುವ ಬಹುದೊಡ್ಡ ನಾಟಕದ ವಿಚಾರದಲ್ಲಿ ಜೆಡಿಎಸ್ ಅಥವಾ ದೇವೇಗೌಡ್ರ ಕುಟುಂಬವನ್ನು ಎಳೆಯುವ ಅವಶ್ಯಕತೆಯಿಲ್ಲ”ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಬಿಜೆಪಿಯಲ್ಲಿನ ಗೊಂದಲವನ್ನು ಇಟ್ಟುಕೊಂಡು ನಾವು ಬೇಳೆ ಬೇಯಿಸಿಕೊಳ್ಳುವ ಯಾವ ಅವಶ್ಯಕತೆಯೂ ನಮಗಿಲ್ಲ. ಕೊರೊನಾದ ಈ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಏನು ಆರೋಪ ಕೇಳಿ ಬಂದರೂ ಸುಮ್ಮನಿದ್ದೇವೆ”ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಎರಡು ರಾಷ್ಟ್ರೀಯ ಪಕ್ಷಗಳು ತಮಗೆ ಬೇಕಾದಾಗಲೆಲ್ಲಾ ನಮ್ಮ ಪಕ್ಷದ ಹೆಸರನ್ನು ಬಳಸಿಕೊಳ್ಳುವ ವಿದ್ಯಮಾನಗಳು ಇಂದು ನಿನ್ನೆಯದಲ್ಲ. ಯಡಿಯೂರಪ್ಪ-ದೇವೇಗೌಡ್ರ ನಡುವೆ ವಿಶ್ವಾಸದ ರಾಜಕೀಯ ಎನ್ನುವ ವಿಚಾರ ಬರೀ ಸುಳ್ಳು”ಎಂದು ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ. “ಕೊರೊನಾದ ಈ ಸಂದರ್ಭದಲ್ಲಿ ಬೇರೆ ಪಕ್ಷದಂತೆ ಸರಕಾರವನ್ನು ಬರೀ ಟೀಕಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ರಚನಾತ್ಮಕ ಸಲಹೆಗಳನ್ನು ನೀಡುತ್ತಿದ್ದೇವೆ, ಯಾಕೆಂದರೆ ಇದು ರಾಜಕೀಯ ಮಾಡುವ ಸಮಯವಲ್ಲ”ಎಂದು ಪರೋಕ್ಷವಾಗಿ ಕಾಂಗ್ರೆಸ್ ನಿಲುವನ್ನು ಟೀಕಿಸಿದ್ದಾರೆ.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ