ಕೊಪ್ಪಳ,ಜೂ. 03: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಡಿಎಪಿ ಗೊಬ್ಬರ ಬೇಡಿಕೆ ವರದಿಯನ್ನು ತಯಾರಿಸಿಕೊಂಡು ಯಾವುದೇ ರೀತಿಯ ಡಿಎಪಿ ಗೊಬ್ಬರದ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

2021-21ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು (ಜೂನ್ 02) ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಸಿಗುವಂತಾಗಬೇಕು. ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ದೂರುಗಳು ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ರಸಗೊಬ್ಬರವನ್ನು ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ಸ್(ಪಿಒಎಸ್) ಮುಖಾಂತರವೇ ಮಾರಾಟ ಮಾಡಬೇಕು. ಜಿಲ್ಲೆಗೆ ಬೇಕಾಗುವ ರಸಗೊಬ್ಬರದ ಮಾಹಿತಿ ಪಡೆದು ಯಾವುದೇ ಕೊರತೆ ಆಗದಂತೆ ಹಾಗೂ ಸಮಯಕ್ಕೆ ಸರಿಯಾಗಿ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಕೊಪ್ಪಳ ಕೃಷಿ ಇಲಾಖೆಯ ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಎಲ್.ಸಿದ್ದೇಶ ಅವರು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆ 84 ಮೀ.ಮೀ. ಇದ್ದು ವಾಸ್ತವಿಕವಾಗಿ 103 ಮೀ.ಮೀ. ಆಗಿದ್ದು, ಶೇ.22 ರಷ್ಟು ಹೆಚ್ಚಿನ ಮಳೆಯಾಗಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ, ಮುಸುಕಿನಜೋಳ ಹಾಗೂ ಜೋಳ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದ್ದು, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆ ಬೀಜಕ್ಕೆ ಸಂಬAಧಿಸಿದAತೆ 20 ಆರ್.ಎಸ್.ಕೆ ಜೊತೆ 09 ಅಡಿಷನಲ್ ಪಾಯಿಂಟ್ ಮಾಡಲಾಗಿದ್ದು, ಪ್ರಸ್ತುತ ಬಿತ್ತನೆ ಬೀಜದ ಕೊರತೆ ಇಲ್ಲ. ಅಲ್ಲದೇ ಯೂರಿಯಾದ ಕೊರತೆಯೂ ಇಲ್ಲ. ಡಿಎಪಿ ಗೊಬ್ಬರದ ಕೊರತೆಯಾಗದಂತೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯ ಯಾವ ಕಡೆ ಎಷ್ಟು ಡಿಎಪಿ ಬೇಕಾಗುತ್ತದೆ ಎಂಬುವುದರ ಕುರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕ ಕೃಷಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರ ಸಂಘದ ಅಧ್ಯಕ್ಷರಾದ ಕೊಪ್ಪಳದ ಪದಂ ಛೋಪ್ರಾ, ಗಂಗಾವತಿಯ ಗುರುಪಾದಪ್ಪ, ಕುಷ್ಟಗಿಯ ಚಂದ್ರಶೇಖರ ಮುದೇನೂರು ಸೇರಿದಂತೆ ಕೃಷಿ ಪ್ರವರ್ತಕರು ಹಾಗೂ ಮಾರಾಟಗಾರು, ವಿಮಾ ಕಂಪನಿಯವರು ಉಪಸ್ಥಿತರಿದ್ದರು.