ಕಲ್ಯಾಣಸಿರಿ

ವರ್ಣಬೇಧಗಳ ವಿರುದ್ಧ ಕಿಡಿಕಾರಿದ ಬಸವಣ್ಣ.


ಯಲಬುರ್ಗಾ: ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 889 ನೇಯ ಬಸವೇಶ್ವರ ಜಯಂತಿಯನ್ನ ಆಚರಿಸಲಾಯಿತು. ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ಶರಣ ಬಸವರಾಜ ಹೂಗಾರ ಇವರು
ಗುರು ಬಸವಣ್ಣನವರಿಗೆ ಸಮಾಜದ ಮೇಲೆ ತಾಯಿ ಪ್ರೀತಿ ಇತ್ತು. ಪ್ರತಿಯೊಂದು ನಿಟ್ಟಿನಲ್ಲಿಯೂ ಕೂಡ ಸಮಾಜದ ಏಳ್ಗೆಗಾಗಿ ಚಿಂತಿಸುತ್ತಿದ್ದರು. ದೀನ, ದಲಿತರು, ಅಸ್ಪೃಶ್ಯರ ಬಗ್ಗೆ ಎಲ್ಲಿಲ್ಲದ ಕನಿಕರ ಮೂಡಿತ್ತು.ಅಷ್ಟೇ ಅಲ್ಲದೆ ಅನಿಷ್ಟ ವರ್ಣಬೇಧಗಳ ವಿರುದ್ಧ ಕಿಡಿಕಾರುತ್ತ, ಕಾಸಿಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ಎಂಬ ವಚನದ ಮೂಲಕ ತಿಳಿಸಿ, ಸರ್ವರೂ ಸಮಾನರು, ಯಾರು ಹೆಚ್ಚಿಲ್ಲ ಯಾರೂ ಸಹ ಕಡಿಮೆ ಇಲ್ಲ. ಎಲ್ಲರೂ ತಾಯಿಯ ಗರ್ಭದಿಂದಲೇ ಹುಟ್ಟಿ ಬರಬೇಕು. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ಎಂದು ವೈಜ್ಞಾನಿಕ ವಿಚಾರವನ್ನು ಬಿತ್ತರಿಸಿದರು. ನಿಜವಾದ ಕುಲಜರೆಂದರೆ ಲಿಂಗಪಥವನ್ನು ಹಾಗೂ ನಿರಾಕಾರ ಶಿವನನ್ನು ಅರಿತವರೇ ಕುಲಜರು, ಜ್ಞಾನದಿಂದ ವ್ಯಕ್ತಿಯ ಆದರ್ಶದಿಂದ, ಅವನನ್ನು ಉತ್ತಮ ಕನಿಷ್ಠನೆಂದು ಗುರುತಿಸಬಹುದಲ್ಲದೆ ಜಾತಿಯಿಂದಲ್ಲ ಎಂದು ತಿಳಿಸುತ್ತ ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು, ನಮ್ಮ ಡೋಹಾರ ಕಕ್ಕಯ್ಯ., ಚಿಕ್ಕಯ್ಯ ಎನ್ನಯ್ಯ ಕಾಣಿರಣ್ಣ ಎಂದು ಅಸ್ಪೃಶ್ಯ ಸಮಾಜದಲ್ಲಿ ಜನಿಸಿದರೂ ಸತ್ಯವನ್ನು ದರ್ಶಿಸಿಕೊಂಡವರು ನಮ್ಮ ತಾಯಿ ತಂದೆಗಳು ಎಂದು, ವಿಶ್ವಮಹಾ ಮಾನವತೆಯ ಹರಿಕಾರಕರಾಗಿದ್ದಾರೆ.
ಗುರು ಬಸವಣ್ಣನವರು ದಾನಕ್ಕಿಂತಲೂ ದಾಸೋಹಭಾವ ದೊಡ್ಡದೆಂದು ತಿಳಿಸಿ. ತನುನಿಮ್ಮದೆಂಬೆ ಮನ ನಿಮ್ಮದೆಂಬೆ ಧನ ನಿಮ್ಮದೆಂಬೆ ಎಂದು ತ್ರಿಕರ್ಣಶುದ್ಧರಾಗಿ ಶರಣರ ಸೇವೆಗಾಗಿ ಪರಿತಪಿಸುತ್ತಾರೆ. “ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ” ಎಂದು ಬಾಗಿದ ತಲೆ ಮುಗಿದ ಕೈಯಿಂದ ಶಿವ ಶರಣರನ್ನು ಕಲ್ಯಾಣದತ್ತ ಬರಮಾಡಿಕೊಂಡರು, ಅವರಲ್ಲಿ 774 ಧರ್ಮದ ಮುಖಂಡರು ತತ್ವಜ್ಞಾನಿಗಳು, ಪರಮದಾಸೋಹಿಗಳು, ಶಾಂತಿಮೂರ್ತಿಗಳು ಕಾಯಕಜೀವಿಗಳು, ದಾಸೋಹ ಮೂರ್ತಿಗಳು, ನೀತಿವಂತರಾಗಿ ಬಾಳಿ ಬೆಳಗಿದರು. “ಅನುಭವ ಮಂಟಪ”ವೆಂಬ ಮಂಟಪದಲ್ಲಿ ಸಮಾಜದ ಏಳ್ಗೆಗಾಗಿ ಚಿಂತನ ಮಂಥನ ನಡೆಸುವ ಕಾರ್ಯವನ್ನು ಎಲ್ಲಾ ಶರಣ ಶರಣೆಯರ ಸಮ್ಮುಖದಲ್ಲಿ ತಮ್ಮ ತಮ್ಮ ಕಾಯಕ ಮುಗಿದ ನಂತರ ಚರ್ಚಿಸುತ್ತಿದ್ದರು. ಅಲ್ಲದೆ ಜನಸಂದರ್ಶನಕ್ಕಾಗಿ ಜನತೆಯ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ನೀಡಲು ಪರುಷಕಟ್ಟೆಯೆಂಬ ಸ್ಥಳದಲ್ಲಿ ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸಲು ಅಸಾಧ್ಯ.
ಗುರು ಬಸವಣ್ಣನವರು ನಾನು ಗುರುವೆಂದು ಒಂದು ವಚನದಲ್ಲಿಯೂ ಸಹ ಬರೆದುಕೊಂಡಿಲ್ಲ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಕಿಂಕರತ್ವದ ಮೇರು ಮೂರ್ತಿಯಾಗಿ, ಪಂಚಪುರುಷದ ವ್ಯಕ್ತಿತ್ವವನ್ನು ಹೊಂದಿದ್ದರು. ಜ್ಞಾನಿಗಳಲ್ಲದೆ ಕಳ್ಳರು, ಸುಳ್ಳರು, ವೇಶ್ಯೆಯರು, ಕಟುಕ ಕೊಲೆಗಡುಕರು ಅಲ್ಲದೆ ರಾಜಮಹಾರಾಜರು ಸಹ ತಮ್ಮ ಅಷ್ಟ ವೈಭೋಗಗಳನ್ನು ಬಿಟ್ಟು ಉಟ್ಟ ಬಟ್ಟೆಯಲ್ಲಿಯೇ ಕಲ್ಯಾಣಕ್ಕೆ ಬಂದು, ಸಮಾಜದ ಹಿತಚಿಂತಕರಾಗಿ, ಆದರ್ಶಜೀವಿಗಳಾಗಿ ಬದುಕನ್ನು ನಡೆಸಿದರು. ಗುರುಮುಟ್ಟಿ ಗುರುವಾಗಿ ಎಲ್ಲರನ್ನು ಗುರುವಾಗಿ ಮಾಡಿ, ಉರಿಯುಂಡ ಕರ್ಪೂರದಂತೆ ಪರಮಾತ್ಮನಲ್ಲಿ ಬೆರೆಯುವ ಮಾರ್ಗವನ್ನು ತೋರಿದ ಆಧ್ಯಾತ್ಮದ ದೃವತಾರೆಗಳಾಗಿದ್ದಾರೆ. ಬಸವಾದಿ ಶಿವಶರಣರು ವಚನದಂತೆ ಬದುಕಿ ಬಾಳಿ ಜಗದ ಜನತೆಗೆ ಆದರ್ಶ ಬಸವತತ್ವವನ್ನು ನೀಡಿ ವಿಶ್ವಮಾನವರಾಗಿದ್ದಾರೆ ಬಸವಣ್ಣನವರು. ಇವರು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ (ಇಂಗಳೇಶ್ವರ) ಬಸವಣ್ಣನವರ ಹುಟ್ಟೂರು. ಮಾದರಸ-ಮಾದಲಾಂಬಿಕೆ ಇವರ ತಂದೆ-ತಾಯಿಗಳು. ಇವರಿಗೆ ಮಾರ್ಗದರ್ಶನ ನೀಡಿದವರು ಹಾಗೂ ವಿದ್ಯಾಬ್ಯಾಸ ನೀಡಿದಂತಹವರು ಸಂಗಮೇಶ್ವರ ವಿದ್ಯಾಶ್ರಮದ ಜಾತವೇದಮುಗಳು. ಬಸವಣ್ಣನವರಿಗೆ ಐಹಿಕ ಜೀವನಕ್ಕೆ ಬೇಕಾಗುವ ವಿದ್ಯೆಯೊಂದಿಗೆ ಪಾರಮಾರ್ಥಿಕ ವಿದ್ಯೆಯನ್ನು ಹೇಳಿಕೊಟ್ಟರು. ವಿದ್ಯೆ, ವಿನಯ, ಭಕ್ತಿ, ಸದಾಚಾರಗಳಿಂದ ಬಸವಣ್ಣನವರು ಎಲ್ಲರಿಗೂ ಅಚ್ಚುಮೆಚ್ಚಾದರು. ಸದಾ ಲವಲವಿಕೆ, ನಗುಮೊಗ, ಸರಳ ವರ್ತನೆ, ಆಲೋಚನಾಪರತೆಗಳಿಂದ, ಅದ್ಭುತವಾಗಿ ರೂಪುಗೊಳ್ಳುತ್ತಿರುವ ಗುರು ಬಸವಣ್ಣನವರ ವ್ಯಕ್ತಿತ್ವ ನೋಡಿ ಎಲ್ಲರೂ ಮಾರುಹೋದರು. ಗುರು ಬಸವಣ್ಣನವರು ಬಿಜ್ಜಳ ಅರಸನ ಮಂತ್ರಿಗಳಾದರು. ಬಲದೇವರ ಮಗಳು ನೀಲಗಂಗಾಂಬಿಕೆಯ ಜೊತೆ ಬಸವಣ್ಣನವರ ವಿವಾಹವಾಯಿತು. ಕಲ್ಯಾಣದಲ್ಲಿ ಬಸವಣ್ಣನವರು ‘ಅನುಭವ ಮಂಟಪ’ ಸ್ಥಾಪನೆ ಮಾಡಿದರು. ಇದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಂಡಿತು. ಜಾತಿಭೇದವಿಲ್ಲದೆ ಎಲ್ಲರಿಗೂ ಇಲ್ಲಿ ಪ್ರವೇಶವಿತ್ತು. ಸ್ತ್ರೀಯರು ಕೂಡಾ ಭಾಗವಹಿಸುತ್ತಿದ್ದರು. ಅನುಭವ ಮಂಟಪದ ಮೂಲಕ ಹೊಸ ಸಮಾಜ ರಚನೆಯ ಕಾರ್ಯವನ್ನು ಮುಂದುವರಿಸಿದರು. ‘ದೇವನೊಬ್ಬ ನಾಮ ಹಲವು’‘ದಯವೇ ಧರ್ಮದ ಮೂಲ’ ಅಹಂಕಾರವಿರಬಾರದು, ಶುದ್ಧ ಅಂತಃಕರಣಕ್ಕೆ ಹೆಚ್ಚಿನ ಮಹತ್ವವಿರಬೇಕು, ಪ್ರತಿಯೊಬ್ಬರು ಸತ್ಯಶುದ್ಧಕಾಯಕ ಕೈಗೊಳ್ಳಬೇಕು. ಈ ತತ್ತ್ವಗಳನ್ನು ವಚನಗಳಲ್ಲಿ ಬರೆದುದಲ್ಲದೆ ಆಚರಣೆಯಲ್ಲಿ ತಂದರು. ಭಕ್ತಿಭಂಡಾರಿ ಬಸವಣ್ಣನೆಂದು ಖ್ಯಾತರಾಗಿ, ನವಸಮಾಜದ ಉದಯಕ್ಕೆ ಅಡಿಪಾಯ ಹಾಕಿದವರು ಇವರಾಗಿದ್ದಾರೆ. ಸಮಾನತೆ, ಜಾತಿಭೇದವಿಲ್ಲದ ಸಮಾಜ ನಿರ್ಮಾಣದ ಕನಸು ಇವರದ್ದಾಗಿತ್ತು. ಅನೇಕ ಶಿವಶರಣರಿಗೆ ಇವರು ಸ್ಪೂರ್ತಿಯಾಗಿ ದೇವಮಾನವರಾಗಿ ಬಾಳಿ ಎಲ್ಲರಿಗೂ ದೇವಮಾನವರಾಗುವ ದಾರಿಯನ್ನು ತೋರಿಸಿಕೊಟ್ಟವರು. ಒಂಭತ್ತು ಶತಮಾನಗಳು ಕಳೆದರೂ ಅವರು ಬಿಟ್ಟ ಬೆಳಕು ಪ್ರಕಾಶಮಾನವಾಗಿ ಇನ್ನೂ ಉಳಿದಿದೆ. ಇವರು ಜಾತಿ ಪದ್ಧತಿಯು ನಮ್ಮ ಸಮಾಜದ ಶಾಪಗಳಲ್ಲೊಂದು ಎಂದು ಮನಗಂಡು, ಜಾತಿಪದ್ಧತಿಯನ್ನು ನಿರಾಕರಿಸಿದರು. ಅಂಧಶ್ರದ್ಧೆಯನ್ನು ಖಂಡಿಸಿ ಲಿಂಗವಂತ ಧರ್ಮವನ್ನು ಸಂಸ್ಥಾಪಿಸಿದರು. ಎಲ್ಲಾ ಮಾನವರು ಸಮಾನರೆಂದು ಬೋಧಿಸಿದರು. ಗಂಡು-ಹೆಣ್ಣು ಎಂಬ ಭೇದವನ್ನು ತೊಲಗಿಸಿ, ಪರಸ್ಪರ ಸಮಾನರೆಂದು ಸಾರಿದರು. “ಕಾಯವೇ ಕೈಲಾಸ” ಎಂಬ ತತ್ತ್ವವನ್ನು ಎತ್ತಿಹಿಡಿದರು. ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಇಂದಿನ ಸಮಾಜದ ಏರುಪೇರು ಹೋಗಬೇಕಾದರೆ ಪ್ರತಿಯೊಬ್ಬರು ಅವರ ತತ್ವ್ತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಭಾರತ ದೇಶದ ಸಮಾಜ ಸುಧಾರಕರಲ್ಲಿ ಬಸವಣ್ಣನವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಆದರ್ಶವೇ ಮಾನವ ಕುಲಕೋಟಿಗೆ ದಾರಿದೀಪವಾಗಿದೆ ಎಂದು ನುಡಿದರು. ನಂತರ ಶರಣ ರೇಣುಕಪ್ಪ ಮಂತ್ರಿ
ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾದ ಹನಮೇಶ್ ಹೊಸಳ್ಳಿ, ವಿರಪಣ್ಣ ಕೆ ಮಂತ್ರಿ, ಬಸವರಾಜ ಕೋಳೂರು, ಬಸಣ್ಣ ಹೊಸಳ್ಳಿ, ಲಿಂಗನಗೌಡ ದಳಪತಿ, ಜಗದೀಶ್ ಮೇಟಿ,ಬಸವಂತಪ್ಪ ಮಂತ್ರಿ, ಶಾಂತಪ್ಪ ಹೊಸಳ್ಳಿ, ಹಾಗು ಅಕ್ಕ ನಾಗಲಾಂಬಿಕೆ ಬಳಗದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ