ಅರೋಗ್ಯತಾಜಾ ಸುದ್ದಿ

ಕೊಪ್ಪಳ :ಹಿಜಾಬ್ ಅಂತಿಮನಿರ್ಧಾರದ ಮುಂದೂಡಿಕೆ ಹಿನ್ನೆಲೆ ಕಾಲೇಜು ರಜೆಯ ಅವಧಿ ವಿಸ್ತರಣೆ:ಏರ್ಪಡುವಶೈಕ್ಷಣಿಕಬಿಕ್ಕಟ್ಟಿಗೆ ಸರ್ಕಾರವೇ ನೇರ ಹೊಣೆ

ಕೊಪ್ಪಳ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ಮುಂದೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಾಲೇಜು ರಜೆಯ ಅವಧಿಯನ್ನು ಸಹ ಮುಂದೂಡಿದೆ. ಸರ್ಕಾರವು ಹಿಜಾಬ್ ಸುತ್ತುವರಿದ ವಿಚಾರವನ್ನು ಸರಿಯಾಗಿ ನಿರ್ವಹಣೆ ಮಾಡದೆ, ಈಗ ಕಾಲೇಜುಗಳ ಆರಂಭವನ್ನು ಮತ್ತಷ್ಟು ವಿಸ್ತರಣೆ ಮಾಡಿರುವುದು ರಾಜ್ಯದ ವಿದ್ಯಾರ್ಥಿಗಳಲ್ಲಿ ಅತೀವ ಆತಂಕವನ್ನು ಸೃಷ್ಟಿ ಮಾಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಶಾಲಾ ಕಾಲೇಜುಗಳನ್ನು ತೆರೆಯಲು ಆದೇಶ ನೀಡಿದ್ದರೂ ಸಹ, ರಾಜ್ಯ ಸರ್ಕಾರವು ಅದಕ್ಕೆ ವ್ಯತಿರಿಕ್ತವಾಗಿ ಕಾಲೇಜುಗಳನ್ನು ತೆರೆಯದೆ, ರಜೆಯ ಅವಧಿಯನ್ನು ವಿಸ್ತರಿಸಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಪ್ರಸ್ತುತ ಶೈಕ್ಷಣಿಕ ವರ್ಷ ಬಹಳ ತಡವಾಗಿ ಆರಂಭವಾಗಿತ್ತು. ಆದ ಕಾರಣ, ಪಾಠಗಳು ಸಹ ಪೂರ್ಣಗೊಂಡಿಲ್ಲ. ಆದರೆ, ಈಗಾಗಲೇ ಹಲವು ಕೋರ್ಸ್ ಗಳ ಅಂತಿಮ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ವಿದ್ಯಾರ್ಥಿಗಳ ಮೇಲೆ ಅಪಾರವಾದ ಒತ್ತಡವನ್ನು ಹೇರಿವೆ. ಇಂತಹ ಸಂದರ್ಭದಲ್ಲಿ, ಕಾಲೇಜು ರಜೆಯ ಅವಧಿಯನ್ನು ವಿಸ್ತರಣೆ ಮಾಡುತ್ತಾ ಹೋದರೆ, ಇನ್ನಷ್ಟು ಶೈಕ್ಷಣಿಕ ಬಿಕ್ಕಟ್ಟು ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಎಲ್ಲ ಹಂತದ ವಿದ್ಯಾರ್ಥಿಗಳು ತಾವು ಎದುರಿಸುತ್ತಿದ್ದ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಒಂದಾಗಿ ಹೋರಾಟ ಬೆಳೆಸಿದ್ದರು. ಅವುಗಳಲ್ಲಿ ಹಲವು ಬೇಡಿಕೆಗಳನ್ನು ಗೆದ್ದು, ಯಶಸ್ವಿಯೂ ಆಗಿದ್ದರು. ಇದರೊಂದಿಗೆ ರಾಜ್ಯವ್ಯಾಪಿ ಶಿಕ್ಷಕರ ಪ್ರಬಲ ಹೋರಾಟವು ಬೆಳೆದಿತ್ತು. ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರು ಒಂದಾಗುತ್ತಿದ್ದರು. ಈಗ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವನ್ನು ಮುರಿಯಲು ಹಾಗೂ ಇನ್ನಿತರ ಚಳುವಳಿಗಳನ್ನು ಹತ್ತಿಕ್ಕಲು ಈ ವಿಷಯವನ್ನು ಹುಟ್ಟು ಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಏರ್ಪಡುವ ಎಲ್ಲ ಶೈಕ್ಷಣಿಕ ಸಮಸ್ಯೆಗಳಿಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಾಲೇಜು ತೆರೆಯುವುದು ಮುಂದಕ್ಕೆ ಹೋದಂತೆಲ್ಲ, ಪರೀಕ್ಷೆಗಳನ್ನು ಮುಂದೂಡವ ಪರಿಸ್ಥಿತಿ ಬರುತ್ತದೆ. ಕಾಲೇಜು ಆರಂಭದ ಅವಧಿ ವಿಸ್ತರಣೆ ಹಿನ್ನೆಲೆಯಲ್ಲಿ ಏರ್ಪಡುವ ಎಲ್ಲ ಶೈಕ್ಷಣಿಕ ಸಮಸ್ಯೆಗಳಿಗೆ ಸರ್ಕಾರವೆ ಸಂಪೂರ್ಣ ಜವಾಬ್ದಾರಿ ವಹಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಎ.ಐ.ಡಿ.ಎಸ್.ಓ ಒತ್ತಾಯಿಸುತ್ತದೆ.

ಸರ್ಕಾರ ಮತ್ತು ಕೆಲವು ವಿಭಜಕ ಸಂಘಟನೆಗಳು ವಿದ್ಯಾರ್ಥಿ ಐಕ್ಯತೆಯನ್ನು ಮುರಿಯಲು ಎಷ್ಟೇ ಪ್ರಯತ್ನ ಪಟ್ಟರೂ, ವಿದ್ಯಾರ್ಥಿಗಳು ಅವರ ಪ್ರಚೋದನೆಗೆ ಬಲಿಯಾಗದೆ, ಕೋಮು ಸಾಮರಸ್ಯ ಕಾಪಾಡಿದ್ದಾರೆ. ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಓ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅಭಿನಂದನೆಗಳನ್ನು ತಿಳಿಸುತ್ತಾ, ಇದೆ ರೀತಿಯ ಐಕ್ಯತೆಯನ್ನು ಮುಂದುವರೆಸಿ, ಎಲ್ಲ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಅಣಿಯಾಬೇಕು ಎಂದು ಕರೆ ನೀಡುತ್ತದೆ.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ