ಕಲ್ಯಾಣಸಿರಿ ವಿಶೇಷ

ಶರಣ ಶ್ರೀ ಅಲ್ಲಮಪ್ರಭುದೇವ ನವರ ಸ್ಮರಣೋತ್ಸವ..

|| ಓಂ ಶ್ರೀ ಗುರುಬಸವಲಿಂಗಾಯ ನಮಃ ||


ತಂದೆ : ನಿರಹಂಕಾರ
ತಾಯಿ : ಸುಜ್ಞಾನಿ ದೇವಿ
ಕಾಯಕ : ವಿರಕ್ತರು / ಜಂಗಮರು
ಸ್ಥಳ : ಬಳ್ಳಿಗಾವಿ (ಬಳ್ಳಿಗಾವೆ), ಶಿಕಾರಿಪುರ ತಾ, ಶಿವಮೊಗ್ಗ.
ಜಯಂತಿ : ಯುಗಾದಿ ಯಂದು
ಲಭ್ಯ ವಚನಗಳ ಸಂಖ್ಯೆ : ೧೬೩೬
ಅಂಕಿತ : ಗುಹೇಶ್ವರ / ಗೊಹೇಶ್ವರ

ಅಲ್ಲಮಪ್ರಭುದೇವರು ಶೂನ್ಯ ಸಿಂಹಾಸನ ಏರಿದ ಪ್ರಥಮರು. ಅತ್ಯಂತ ನೇರ ನಿಷ್ಠುರವಾದಿಗಳು. ಬಸವಣ್ಣನವರು ಸ್ಥಾಪಿಸಿದ ಪ್ರಪಂಚದ ಮೊದಲ ಪಾರ್ಲಿಮೆಂಟ್ ಎನಿಸಿದ “ಅನುಭವ ಮಂಟಪ” ದ ಪ್ರಥಮ ಅಧ್ಯಕ್ಷರು. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದವರು. ತಮ್ಮ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದವರು. ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಬಳ್ಳಿಗಾವೆಯೇ ಅಲ್ಲಮಪ್ರಭುವಿನ ಜನ್ಮಸ್ಥಳ. ಅಲ್ಲಮರ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ಲಿಂಗಾಯತ ಕಾವ್ಯಗಳಲ್ಲಿ ಅಲ್ಲಮರ ತಂದೆಯ ಹೆಸರು ನಿರಹಂಕಾರನೆಂಬುವವರು. ತಾಯಿ ಸುಜ್ಞಾನದೇವಿ. ನಿರಹಂಕಾರರು ಮೂಲತಃ ಕರುವೂರಿನವರು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದರು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು. ಅಲ್ಲಮಪ್ರಭುವು ದೇವಾಲಯದಲ್ಲಿ ಮದ್ದಳೆ ಬಾರಿಸುವವರಾಗಿದ್ದರು. ಅನಿಮಿಷಯ್ಯ / ಅನಿಮಿಷಯೋಗಿ ಇವರ ಗುರುಗಳು. ಇವರಿಂದ ಅಲ್ಲಮರಿಗೆ ಇಷ್ಟಲಿಂಗ ದೊರೆಯಿತು. ನಂತರ ಬಸವಕಲ್ಯಾಣಕ್ಕೆ ಬಂದು ಆಲ್ಲಿ ಬಸವಣ್ಣನವರ ಒಡನಾಟದಿಂದ ಅವರ ವ್ಯಕ್ತಿತ್ವ ವಿಕಾಸ ಹೊಂದಿತು. ನಂತರದಲ್ಲಿ ಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದು, ಆಧ್ಯಾತ್ಮಿಕ ಸಾಧನೆಗೆ ಸಂಚಾರಗೈಯುತ್ತಾರೆ.
ಅಲ್ಲಮರ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರ ಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ. ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ, ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಯಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ತೆಲಗು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು. ಈ ಮಹಾಕವಿಗಳಲ್ಲದೆ, ಅಲ್ಲಮಪ್ರಭುವಗಳ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ಲಿಂಗಾಯತ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅವರ ಕಾಲದ ಬಲುದೊಡ್ಡ ಸಾಹಿತ್ಯ ಚೇತನವಾಗಿದ್ದರೆನ್ನುವುದು, ಅವರವೇ ಆದ ಅನೇಕ ವಚನಗಳು ಉಪಲಬ್ಧವಿರುವುದು, ಅವರ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ.
ಬಸವಣ್ಣನವರ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗುತ್ತಾರೆ. ಅಲ್ಲಮರ ವಚನಚಂದ್ರಿಕೆಯಲ್ಲಿ ೧೬೩೬ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತಮ್ಮ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಲಿಂಗೈಕ್ಯರಾದರೆಂದು ಪ್ರತೀತಿ. ಇವರ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮರ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವರ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವರದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವರ ವೈಶಿಷ್ಟ್ಯವೂ ಹೌದು.

ಇವರದೊಂದು ವಚನ:
‘ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು..
‘ಸ’ ಎಂಬಲ್ಲಿ ಸರ್ವಜ್ಞನಾದೆನು..
‘ವ’ ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು..
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಭೇದವನರಿದು ಆನೂ ನೀನೂ ‘ಬಸವಾ’ ‘ಬಸವಾ’ ‘ಬಸವಾ’ ಎನುತಿರ್ದೆವಯ್ಯಾ ಗುಹೇಶ್ವರಾ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

8 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

8 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

8 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

8 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

8 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

9 hours ago